
ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡಿದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ತಮ್ಮ ಮಗ ಹೇಮಂತ್ ಅಪಘಾತಕ್ಕೀಡಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದರಿಂದ ತಮಗೆ ಜಾಮೀನು ನೀಡುವಂತೆ ವಿನಯ್ ಕುಲಕರ್ಣಿ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಅವರಿಗೆ ಕೇವಲ ಎರಡು ದಿನಗಳ ಮಟ್ಟಿಗೆ ಜಾಮೀನು ನೀಡಿದ್ದು, ಸೆಪ್ಟೆಂಬರ್ 11ರ ಸಂಜೆ 5 ಗಂಟೆಯೊಳಗೆ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿ ಪುನಃ ಜೈಲಿಗೆ ಮರಳುವಂತೆ ಸೂಚಿಸಿದೆ.
ಸದ್ಯ ಜಾಮೀನು ಪಡೆದಿರುವ ಕುಲಕರ್ಣಿ ಅವರನ್ನು ಮಂಗಳವಾರ ಸಂಜೆಯೇ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪುತ್ರನ ಶಸ್ತ್ರಚಿಕಿತ್ಸೆ ಬೆಂಗಳೂರಿನಲ್ಲಿ ನಡೆಯುವುದರಿಂದ ವಿನಯ್ ಕುಲಕರ್ಣಿ ಅವರು ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ನ್ಯಾಯಾಲಯದ ಸೂಚನೆಯ ಪ್ರಕಾರ, ಜಾಮೀನು ಅವಧಿಯಲ್ಲಿ ವಿನಯ್ ಕುಲಕರ್ಣಿ ಯಾವುದೇ ಸಭೆಗಳನ್ನು ನಡೆಸುವಂತಿಲ್ಲ.
ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ವಿನಯ್ ಕುಲಕರ್ಣಿ ಅವರು ಜಾಮೀನಿನ ಮೇಲೆ ಹೊರಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ಜಾಮೀನು ರದ್ದುಗೊಳಿಸಿದ್ದರಿಂದ ಅವರು ಮತ್ತೊಮ್ಮೆ ಜೈಲು ಸೇರುವಂತಾಗಿತ್ತು.

