‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ

Spread the love

‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ

ನವಲಗುಂದ: ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆದ ಮತ ಕಳ್ಳತನದ ಆರೋಪವನ್ನು ದೇಶಾದ್ಯಂತ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ‘ವೋಟ್ ಚೋರ್, ಗದ್ದಿ ಛೋಡ್’ (ವೋಟ್ ಕದ್ದವರೇ, ಅಧಿಕಾರ ಬಿಡಿ) ಎಂಬ ವಿನೂತನ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಎನ್. ಹೆಚ್. ಕೋನರಡ್ಡಿ ಶನಿವಾರ ಚಾಲನೆ ನೀಡಿದರು.

ರಾಜ್ಯದಲ್ಲಿ ನಡೆದ ‘ಮತ ಕಳ್ಳತನ’ ಆರೋಪ: ನಗರದ ಕಾಂಗ್ರೆಸ್ ಭವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎನ್. ಹೆಚ್. ಕೋನರಡ್ಡಿ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ “ಭಾರಿ ಸಂಖ್ಯೆಯಲ್ಲಿ ಮತಗಳ್ಳತನ” ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. “ರಾಜ್ಯದ ಮಹಾದೇವಪುರ ಮತ್ತು ಆಳಂದ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಳ್ಳು ಮತದಾರರನ್ನು ಸೇರ್ಪಡೆ ಮಾಡಿ, ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಫಲಿತಾಂಶ ಬರುವಂತೆ ಮಾಡಲು ಚುನಾವಣಾ ಆಯೋಗ ಕರ್ತವ್ಯ ನಿರ್ವಹಿಸುತ್ತಿದೆ” ಎಂದು ನೇರವಾಗಿ ದೂರಿದರು.

ರಾಹುಲ್ ಗಾಂಧಿ ಹೋರಾಟಕ್ಕೆ ಬೆಂಬಲ: ಈ ಅಕ್ರಮಗಳನ್ನು ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸಾಕ್ಷಿಗಳ ಸಮೇತ ಬಹಿರಂಗಪಡಿಸಿದ್ದಾರೆ. ಜಾತ್ಯಾತೀತ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ತುರ್ತು ಇದೆ. ಇದೇ ಕಾರಣಕ್ಕೆ ಅವರು ದೇಶಾದ್ಯಂತ ‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಈ ಹೋರಾಟಕ್ಕೆ ಬೆಂಬಲವಾಗಿ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಕೋನರಡ್ಡಿ ತಿಳಿಸಿದರು.

ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ: ಈ ಸಹಿ ಸಂಗ್ರಹ ಅಭಿಯಾನವನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಎಲ್ಲ ಬೂತ್‌ಗಳಲ್ಲಿ ಹೆಚ್ಚು ಸಹಿ ಸಂಗ್ರಹಣೆ ಮಾಡಲು ಪಕ್ಷದ ಮುಖಂಡರಿಗೆ ಕೋನರಡ್ಡಿ ನಿರ್ದೇಶನ ನೀಡಿದರು. “ಭಾರತದ ಪ್ರಜಾಪ್ರಭುತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು, ಭಾರತ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ” ಎಂದು ಅವರು ಕರೆ ನೀಡಿದರು.

ಸಹಿ ಸಂಗ್ರಹ ಅಭಿಯಾನದ ಚಾಲನಾ ಸಮಾರಂಭದಲ್ಲಿ ನವಲಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಜಿಲ್ಲಾ ಸೇವಾದಳ ವಿಜಯಪ್ಪಗೌಡ ಪಾಟೀಲ, ಪುರಸಭೆ ಸದಸ್ಯರುಗಳಾದ ಮಂಜು ಜಾಧವ, ಅಪ್ಪಣ್ಣ ಹಳ್ಳದ, ಮಾಂತೇಶ ಭೋವಿ, ಮೊದೀನಸಾಭ ಶಿರೂರ, ಯುವ ಕಾಂಗ್ರೆಸ್‌ ಮುಖಂಡ ಕಿರಣ ಉಳ್ಳಿಗೇರಿ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *