



ಕಲಘಟಗಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಸೋಮವಾರದಂದು ಕಲಘಟಗಿ ತಾಲೂಕಿನಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅಲೆಮಾರಿ ಸಮುದಾಯದವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಅಲ್ಲದೆ, ಅತಿವೃಷ್ಟಿ ಹಾಗೂ ಕಾಡು ಪ್ರಾಣಿಗಳಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲೆಮಾರಿಗಳಿಗೆ ಸೂರು ಭರವಸೆ
ಕಲಘಟಗಿ ಪಟ್ಟಣ ಪಂಚಾಯಿತಿ ಕಟ್ಟಡ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಮೀಸಲಾದ ಜಾಗದಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದ ಅಲೆಮಾರಿ ಕುಟುಂಬಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಕುರಿತು ಗಮನಹರಿಸಿದ ಸಚಿವರು, ಅಲೆಮಾರಿ ಸಮುದಾಯದವರಿಗೆ ಆಶ್ರಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಪೌರಾಡಳಿತ ಇಲಾಖೆಯ ನಗರೋತ್ಥಾನ ಯೋಜನೆಯಡಿ ಈ ಜಾಗದಲ್ಲಿ ಕಟ್ಟಡಗಳು ನಿರ್ಮಾಣವಾಗಲಿವೆ ಎಂದು ಅವರು ತಿಳಿಸಿದರು.
ರೈತರಿಗೆ ಪರಿಹಾರ ಭರವಸೆ
ಕಲಘಟಗಿ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ರೈತ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, “ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸಭೆಗಳನ್ನು ನಡೆಸಿ, ಬೆಳೆ ಹಾನಿ ಪ್ರದೇಶಗಳ ಸಮೀಕ್ಷೆ ಸಹ ನಡೆಸಲಾಗಿದೆ. ನಷ್ಟಕ್ಕೊಳಗಾದ ರೈತರಿಗೆ ನೆರವು ನೀಡಲು ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ” ಎಂದು ಭರವಸೆ ನೀಡಿದರು.
ಇದರ ಜೊತೆಗೆ, ಸಚಿವರು ಗಳಗಿಹುಲಕೊಪ್ಪ, ಹುಲ್ಲಂಬಿ ಹಾಗೂ ತುಮರಿಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ, ಭಾರಿ ಮಳೆಯಿಂದ ಹಾನಿಗೊಳಗಾದ ಹೊಲಗಳನ್ನು ಪರಿಶೀಲಿಸಿದರು. ಕಾಡು ಪ್ರಾಣಿಗಳಿಂದಲೂ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದು, ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಇದೇ ಸಂದರ್ಭದಲ್ಲಿ, ಕಲಘಟಗಿ ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಇಂದಿರಾ ಕ್ಯಾಂಟೀನ್ ಅನ್ನು ಸಚಿವರು ಉದ್ಘಾಟಿಸಿದರು. ಈ ಬಗ್ಗೆ ಮಾತನಾಡಿದ ಅವರು, “ಇಂದಿರಾ ಕ್ಯಾಂಟೀನ್ಗಳು ಪ್ರತಿದಿನ ಲಕ್ಷಾಂತರ ಜನರ ಹಸಿವು ನೀಗಿಸುತ್ತಿವೆ. ಅತ್ಯಂತ ಕಡಿಮೆ ದರದಲ್ಲಿ ಶುಚಿ-ರುಚಿಯಾದ ಆಹಾರ ನೀಡಿ, ಬಡವರ ಹೊಟ್ಟೆ ತುಂಬಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಹೆಮ್ಮೆಯ ವಿಷಯ. ಈ ಎಲ್ಲಾ ಯಶಸ್ಸು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ” ಎಂದು ತಿಳಿಸಿದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

