
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಉದ್ದೇಶದಿಂದ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಕೆ.ಜೆ. ಜಾರ್ಜ್ ಅವರು ಮಹತ್ವದ ಸಭೆ ನಡೆಸಿದರು. ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯವಾಗಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಕಾರ್ಯಕರ್ತರಿಂದ ಮಾಹಿತಿ ಪಡೆದ ಕೆ.ಜೆ. ಜಾರ್ಜ್, ಅವುಗಳ ಶೀಘ್ರ ಮತ್ತು ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಹೆಸ್ಕಾಂ ಅಧ್ಯಕ್ಷರು ಹಾಗೂ ಶಿಗ್ಗಾಂವ್ನ ಮಾಜಿ ಶಾಸಕರಾದ ಶ್ರೀ ಸಯೀದ್ ಅಜೀಂಪೀರ್ ಖಾದ್ರಿ, ನವಲಗುಂದ ಶಾಸಕ ಶ್ರೀ ಎನ್.ಎಚ್. ಕೊನರಡ್ಡಿ, ಡಿ.ಸಿ.ಸಿ. ಅಧ್ಯಕ್ಷ ಶ್ರೀ ಅನಿಲ್ ಕುಮಾರ್ ಪಾಟೀಲ್ ಸೇರಿದಂತೆ ಹಲವು ಪ್ರಾದೇಶಿಕ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

