ಕುಂದಗೋಳ ಕ್ಷೇತ್ರಕ್ಕೆ ಕೋಟ್ಯಂತರ ಅನುದಾನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ; ಗುರುವಿನಹಳ್ಳಿ ನೂತನ ಗ್ರಾ.ಪಂ. ಕಟ್ಟಡ ಸೇರಿದಂತೆ ಹಲವು ಕಾಮಗಾರಿ ಉದ್ಘಾಟನೆ

Spread the love

*ಕುಂದಗೋಳ : (ಗುರುವಿನಹಳ್ಳಿ): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕುಂದಗೋಳ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದು, ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ರೈಲ್ವೆ ಸೇರಿದಂತೆ ಮೂಲಸೌಕರ್ಯ ವಲಯಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅವರು ಸೋಮವಾರದಂದು ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಎಂಜಿಎನ್‌ಆರ್‌ಜಿ ಯೋಜನೆಯ ರಾಜೀವ ಗಾಂಧಿ ಸೇವಾಕೇಂದ್ರ, 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಿರ್ಮಿಸಲಾದ ಭೋಜನಾಲಯ, ಎನ್‌ಆರ್‌ಎನ್‌ಎಂ ಕಟ್ಟಡ, ಗ್ರಾಮೀಣ ಗೋದಾಮು ಹಾಗೂ ಅಂಗನವಾಡಿ ಕಟ್ಟಡ ಮತ್ತು ನೂತನ ಗ್ರಾಮ ಪಂಚಾಯತ್ ಕಾರ್ಯಲಯದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.

ಕೇಂದ್ರದ ಅನುದಾನದ ಕುರಿತು ವಿವರಿಸಿದ ಸಚಿವ ಜೋಶಿ, ಶಾಸಕ ಎಂ.ಆರ್. ಪಾಟೀಲ್ ಅವರ ವಿಶೇಷ ಪ್ರಯತ್ನದ ಫಲವಾಗಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅಡಿಯಲ್ಲಿ ಕುಂದಗೋಳ ಕ್ಷೇತ್ರಕ್ಕೆ 123 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಅದೇ ರೀತಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 88 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು

“ಹಿಂದೊಮ್ಮೆ ಕ್ಷೇತ್ರದ ರಾಮಾಪುರ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ದುಸ್ಥಿತಿ ಕಂಡು, ಶೈಕ್ಷಣಿಕ ಸುಧಾರಣೆಗೆ ದೃಢ ಸಂಕಲ್ಪ ಮಾಡಲಾಯಿತು. ಇದರ ಪರಿಣಾಮವಾಗಿ, ಸಿಎಸ್‌ಆರ್ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸುಮಾರು 350-400 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಲು 31,000 ಡೆಸ್ಕ್‌ಗಳನ್ನು ಒದಗಿಸಲಾಗಿದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಮಾತ್ರ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಾಧ್ಯ” ಎಂದು ಜೋಶಿ ಅಭಿಪ್ರಾಯಪಟ್ಟರು.

ಮನೆ ಮನೆಗೆ ಗಂಗೆ

ಕೇಂದ್ರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ, 1042 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಒಂದು ವರ್ಷದೊಳಗೆ ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಅವರು ಭರವಸೆ ನೀಡಿದರು.

ನೇರ ಅನುದಾನ, ಪಾರದರ್ಶಕ ಆಡಳಿತ

“ಹಿಂದೆ ದೆಹಲಿಯಿಂದ ಕಳುಹಿಸಿದ 100 ರೂಪಾಯಿಯಲ್ಲಿ ಕೇವಲ 15 ರೂಪಾಯಿ ಮಾತ್ರ ಜನರಿಗೆ ತಲುಪುತ್ತಿತ್ತು. ಆದರೆ ಇಂದು ಮೋದಿ ಸರ್ಕಾರವು ನೇರವಾಗಿ ಗ್ರಾಮ ಪಂಚಾಯಿತಿಗಳ ಖಾತೆಗೆ ಅಭಿವೃದ್ಧಿ ಅನುದಾನವನ್ನು ವರ್ಗಾಯಿಸುತ್ತಿದೆ. ಸ್ಥಳೀಯ ಆಡಳಿತಗಳು ‘ಹಳೆ ಕಲ್ಲು, ಹೊಸ ಬಿಲ್ಲು’ ಎಂಬಂತೆ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಈ ಹಣವನ್ನು ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಂಡು ಮಾದರಿ ಕೆಲಸಗಳನ್ನು ಮಾಡಬೇಕು,” ಎಂದು ಅವರು ಕರೆ ನೀಡಿದರು.

ರೈಲ್ವೆ ಮತ್ತು ಹೆದ್ದಾರಿ ಅಭಿವೃದ್ಧಿ

ಕುಂದಗೋಳ, ಸಂಶಿ, ಕಳಸ ಮತ್ತು ಗುಡಗೇರಿ ರೈಲು ನಿಲ್ದಾಣಗಳ ಅಭಿವೃದ್ಧಿ ಹಾಗೂ 7,000 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ ಎಂದರು.

ಮಳಲಿಯಲ್ಲಿ ಕಾಮಗಾರಿಗಳಿಗೆ ಚಾಲನೆ

ಇದಕ್ಕೂ ಮುನ್ನ ಮಳಲಿ ಗ್ರಾಮದಲ್ಲಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಯೋಜನೆಯ ಅನುದಾನದಡಿ ಗುರುವಿನಹಳ್ಳಿ ವಾಯಾ ಮಳಲಿ ಗ್ರಾಮದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ (ರೂ. 3.30 ಕೋಟಿ ಅಂದಾಜು) ಸಚಿವರು ಭೂಮಿ ಪೂಜೆ ನೆರವೇರಿಸಿದರು. ಕೋಲ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಲ್ಲಿ ಕುಂಕೂರು ಗ್ರಾಮದಲ್ಲಿ 27.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 2 ನೂತನ ಶಾಲಾ ಕೊಠಡಿಗಳನ್ನು ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಜೋಶಿ ಸಹಕಾರದಿಂದ ಕ್ಷೇತ್ರಕ್ಕೆ 300 ರಿಂದ 400 ಕೋಟಿಗೂ ಅಧಿಕ ಅನುದಾನ: ಶಾಸಕ ಪಾಟೀಲ್

ಗುರುವಿನಹಳ್ಳಿ ಹಾಗೂ ಮಳಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ್ ಅವರು, “ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹಕಾರದಿಂದ ಕುಂದಗೋಳ ತಾಲೂಕಿಗೆ 300 ರಿಂದ 400 ಕೋಟಿ ರೂಪಾಯಿಗೂ ಅಧಿಕ ಅನುದಾನ ಬಂದಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ,” ಎಂದು ಕೃತಜ್ಞತೆ ಸಲ್ಲಿಸಿದರು.

“ನಾವು ಮಳಲಿ ಅಜ್ಜರ ದರ್ಶನಕ್ಕೆ ಹೋದಾಗ ಅಲ್ಲಿನ ರಸ್ತೆಯ ದುಸ್ಥಿತಿಯನ್ನು ಸಚಿವರ ಗಮನಕ್ಕೆ ತಂದಿದ್ದೆವು. ತಕ್ಷಣವೇ ಸ್ಪಂದಿಸಿದ ಅವರು, ಕೇಂದ್ರ ರಸ್ತೆ ನಿಗಮದಿಂದ (ಸಿಆರ್‌ಎಫ್) 3.30 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿದರು. ಅವರ ಈ ಕಾರ್ಯಕ್ಷಮತೆಯಿಂದಾಗಿಯೇ ಇಂದು ಕಾಮಗಾರಿಗೆ ಚಾಲನೆ ನೀಡಲು ಸಾಧ್ಯವಾಗಿದೆ. ಕೇಂದ್ರ ಸಚಿವರನ್ನು ನಾವು ಯಾವಾಗ ಕೇಳಿದರೂ ಇಲ್ಲ ಎನ್ನದೆ ಅನುದಾನ ನೀಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತಾಲೂಕಿಗೆ 20 ಸೇತುವೆಗಳನ್ನು ಮಂಜೂರು ಮಾಡಿಸಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ನಾವು ಕೇಳಿದಾಗಲೆಲ್ಲ ಸ್ಪಂದಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿ ಕೆಲಸ ಮಾಡಿಸಿಕೊಟ್ಟಿದ್ದಾರೆ. ಅವರ ಈ ಸಹಕಾರವನ್ನು ನಾವು ಸದಾ ಸ್ಮರಿಸುತ್ತೇವೆ,” ಎಂದು ಶಾಸಕರು ತಿಳಿಸಿದರು.

ಮಾದರಿ ಗ್ರಾಮವಾಗಲು ಶ್ರಮ; ಗ್ರಾ.ಪಂ. ಅಧ್ಯಕ್ಷರ ಭರವಸೆ

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರುವಿನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಬೂದಗಣ್ಣವರ ಅವರು, ನೂತನ ಗ್ರಾಮ ಪಂಚಾಯತಿ ಕಟ್ಟಡ ಆಗಲು ಶ್ರಮಿಸಿದ ಗ್ರಾಮದ ಗುರು-ಹಿರಿಯರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕರಾದ ಎಂ ಆರ್ ಪಾಟೀಲ ಹಾಗೂ ವಿವಿಧ ಗಣ್ಯಮಾನ್ಯರಿಗೆ ಅಭಿನಂದನೆ ಸಲ್ಲಿಸಿದರು. “ಗ್ರಾಮದಲ್ಲಿ ಈಗಾಗಲೇ ಸಿ.ಸಿ. ಕ್ಯಾಮರಾ, ಸ್ಟ್ರೀಟ್ ಲೈಟ್, ಸಿ.ಸಿ. ರಸ್ತೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು. ಮುಂದೆಯು ಅಭಿವೃದ್ಧಿಗೆ ಹೆಚ್ಚು ಶ್ರಮಿಸಿ ಮಾದರಿ ಗ್ರಾಮವಾಗಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದರು.

ಗುರುವಿನಹಳ್ಳಿ ಗ್ರಾ.ಪಂ. ದಿವಂಗತ ಸಿ.ಎಸ್. ಶಿವಳ್ಳಿಯವರ ಕನಸಿನ ಕೂಸು: ಷಣ್ಮುಖ ಶಿವಳ್ಳಿ

ನಂತರ ಮಾತನಾಡಿದ ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ ಅವರು, “ಒಂದು ಕಾಲದಲ್ಲಿ ಅನಾಥವಾಗಿದ್ದ ಗುರುವಿನಹಳ್ಳಿ ಗ್ರಾಮಕ್ಕೆ ಮರುಜೀವ ನೀಡಿ, ನೂತನ ಗ್ರಾಮ ಪಂಚಾಯಿತಿಯನ್ನು ಅಸ್ತಿತ್ವಕ್ಕೆ ತಂದಿದ್ದು ನನ್ನ ಸಹೋದರ, ದಿವಂಗತ ಸಚಿವ ಸಿ.ಎಸ್. ಶಿವಳ್ಳಿ. ಈ ಗ್ರಾಮ ಪಂಚಾಯಿತಿ ಅವರ ಕನಸಿನ ಕೂಸು,” ಎಂದು ಭಾವುಕರಾಗಿ ನುಡಿದರು.

“2015 ರಿಂದ 2020ರ ಅವಧಿಯಲ್ಲಿ ಸುಮಾರು 10 ಕೋಟಿ ರೂಪಾಯಿಗಳ ಅನುದಾನ ತಂದು ಗ್ರಾಮದ ಪ್ರತಿಯೊಂದು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಿದರು. ಅಷ್ಟೇ ಅಲ್ಲ, ಗ್ರಾಮದ ಹಳ್ಳಕ್ಕೆ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ ಜನರ ದಶಕಗಳ ಸಮಸ್ಯೆಯನ್ನು ಬಗೆಹರಿಸಿದರು,” ಎಂದು ಷಣ್ಮುಖ ಶಿವಳ್ಳಿ ತಿಳಿಸಿದರು.

ಅಭಿವೃದ್ಧಿ ಹೆಚ್ಚಾಗಲಿ: ಶಿರಹಟ್ಟಿ ಶ್ರೀಗಳ ಆಶೀರ್ವಚನ

ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕ್ಕೀರಶಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, “ಈ ಭಾಗದ ಕೇಂದ್ರ ಸಚಿವರು ಹಾಗೂ ಮತಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ ಅವರು ಹೆಚ್ಚು ಕೆಲಸ ತರಲಿ, ಹೆಚ್ಚು ಅಭಿವೃದ್ಧಿ ಹೊಂದುವಂತ ಕೆಲಸ ಮಾಡಲಿ,” ಎಂದು ಆಶೀರ್ವಚನ ನೀಡಿದರು.

ಇದೇ ಸಮಯದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷರು ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಕುಂದಗೋಳ ಕಲ್ಯಾಣ ಪುರ ಮಠದ ಶ್ರೀ ಪ ಪೂ ಬಸವಣ್ಣಜ್ಜನವರು ಹಾಗೂ ತಿರುಮಲಕೊಪ್ಪದ ಪ ಪೂ ದಾನಯ್ಯ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ತಹಶಿಲ್ದಾರ ರಾಜು ಮಾವರಕ, ಇಒ ಜಗದೀಶ್ ಕಮ್ಮಾರ,ಪಿಡಿಒ ಬಸವರಾಜ ಬಾಗಲ, ಗ್ರಾ ಪಂ ಉಪಾಧ್ಯಕ್ಷ ರತ್ನವ್ವ ನಾ ಪಡೆಸೂರ, ಕಲ್ಲವ್ವ ಶಾಂ ಇಂಗಳಗಿ, ಕಾಶವ್ವ ರಾ ಹುತ್ತನಗೌಡ್ರ, ಪಾರ್ವತೆವ್ವ ಗೂ ಬಾರಕೇರ, ರಾಜಕುಮಾರ ಗಂ ನವಲೂರ, ಅಬ್ದುಲಸಾಬ ದಾ ಅಕ್ಕಿ, ಪರಶುರಾಮ ಮಾಡಲಗಿ, ಗುರುಪಾದಪ್ಪ ಇಚ್ಚಂಗಿ, ಗುರು ಪಾಟೀಲ, ನಾಗನಗೌಡ ಸಾತ್ಮಾರ, ಸಿ ವೈ ಹಿರೇಗೌಡ್ರ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *