ಪುತ್ತೂರಿಗೆ ವೈದ್ಯಕೀಯ ಕಾಲೇಜು; ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದಕ್ಕೆ ಒತ್ತು ನೀಡಿ: ಸಿಎಂ ಸಿದ್ದರಾಮಯ್ಯ ಕರೆ

Spread the love

ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಘೋಷಣೆ; ಗ್ಯಾರಂಟಿ ಟೀಕಿಸಿದವರಿಗೆ ತಿರುಗೇಟು

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಸೋಮವಾರ (ಅಕ್ಟೋಬರ್ ೨೦) ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ‘ಅಶೋಕ ಜನಮನ – ೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಪುತ್ತೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಮಹತ್ವದ ಘೋಷಣೆ ಮಾಡಿದರು. ಇದೇ ವೇಳೆ, ರಾಜ್ಯದ ಅಭಿವೃದ್ಧಿಗೆ ಕೋಮು ಸೌಹಾರ್ದತೆ ಅತ್ಯಗತ್ಯ ಎಂದು ಪ್ರತಿಪಾದಿಸಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.

ಸಮಾನತೆಗಾಗಿ ‘ಕಾಯಕ ದಾಸೋಹ’ ಮತ್ತು ‘ಗ್ಯಾರಂಟಿ’ ಯೋಜನೆಗಳು:
ಭಾಷಣವನ್ನು ಆರಂಭಿಸಿದ ಮುಖ್ಯಮಂತ್ರಿಗಳು, ಶಾಸಕ ಅಶೋಕ್ ರೈ ಅವರು ನಡೆಸುತ್ತಿರುವ ವಸ್ತ್ರ ವಿತರಣೆ ಮತ್ತು ಸಹಭೋಜನ ಕಾರ್ಯಕ್ರಮವು ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯಂತಿದೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

“ಸರ್ಕಾರದ ಬಳಿ ದುಡ್ಡಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ನಮ್ಮ ಕೆಲಸಗಳೇ ಉತ್ತರ. ದುಡ್ಡಿಲ್ಲದಿದ್ದರೆ ಪುತ್ತೂರಿಗೆ ವೈದ್ಯಕೀಯ ಕಾಲೇಜು ಕೊಡಲು ಆಗುತ್ತಿತ್ತೇ?” ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು. ಗ್ಯಾರಂಟಿ ಯೋಜನೆಗಳು ಆರ್ಥಿಕ ನ್ಯಾಯವನ್ನು ಉತ್ತೇಜಿಸಿ, ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿವೆ ಎಂದು ಪ್ರತಿಪಾದಿಸಿದರು.

ಕೋಮು ಸೌಹಾರ್ದಕ್ಕೆ ಒತ್ತು: ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ:
ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೂಕ್ಷ್ಮತೆಯನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಅವರು, “ಜಾತಿ, ಧರ್ಮದ ಹೆಸರಿನಲ್ಲಿ ಜಗಳವಾಡುವುದರಲ್ಲಿ ನಿಮ್ಮ ಜಿಲ್ಲೆ ಒಂದು ಕಾಲದಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, ನಮ್ಮ ಸರ್ಕಾರವು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿರುವ ಕಾರಣದಿಂದಾಗಿ ಈಗ ಪರಿಸ್ಥಿತಿ ಸುಧಾರಿಸಿದೆ” ಎಂದು ಹೇಳಿದರು.

ಯಾವುದೇ ಧರ್ಮವೂ ದ್ವೇಷಿಸಲು ಹೇಳುವುದಿಲ್ಲ. ಪ್ರತಿಯೊಬ್ಬರೂ ಮನುಷ್ಯರಾಗಿ ಬದುಕಲು ಪ್ರಯತ್ನಿಸಬೇಕು. ಕೋಮು ಸೌಹಾರ್ದತೆ ಇದ್ದರೆ ಮಾತ್ರ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಸಾಧ್ಯ. “ಸುಳ್ಳು ಸುದ್ದಿ ಹರಡಿದರೆ ಕಾನೂನು ತಂದು ಕೇಸ್ ಹಾಕುತ್ತೇವೆ,” ಎಂದು ಎಚ್ಚರಿಕೆ ನೀಡಿದ ಅವರು, ಕೋಮು ಸೌಹಾರ್ದ ಕಾಪಾಡಿಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಂವಿಧಾನದ ಪೀಠಿಕೆ ಮತ್ತು ಸಮಾನತೆ:
ಸಂವಿಧಾನದ ಆಶಯಗಳ ಕುರಿತು ಮಾತನಾಡಿದ ಸಿಎಂ, ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪಾಲನೆ ಪ್ರತಿಯೊಬ್ಬರಿಂದಲೂ ಆಗಬೇಕು. ಅಸಮಾನತೆ ಇರುವವರೆಗೆ ಸಮ ಸಮಾಜ ನಿರ್ಮಾಣ ಅಸಾಧ್ಯ. “ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸುತ್ತಿರುವುದು ಯುವಜನರು ಸಂವಿಧಾನದ ಆಶಯಗಳನ್ನು ಅರಿಯಲಿ ಎನ್ನುವ ಕಾರಣಕ್ಕೆ” ಎಂದು ತಿಳಿಸಿದರು. ಅಲ್ಲದೆ, ಪುತ್ತೂರು ಶಾಸಕ ಅಶೋಕ್ ರೈ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ತಮ್ಮ ಮುಂದಿನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *