
ಧಾರವಾಡ: ಮಾ.09: ವಿಶ್ವದ ಮಾಧ್ಯಮ ಮುಕ್ತವಾಗಿದೆ. ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಿಸುವುದು ಮಾಧ್ಯಮದ ಕಾರ್ಯವಾಗಿದೆ. ಹಳೆಯ ಕಾಲದ ಪತ್ರಿಕೋದ್ಯಮ ಬದಲಾಗಿದೆ. ಹೊಸ ಹೊಸ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಪತ್ರಿಕಾ ರಂಗಕ್ಕೆ ಹೊಸ ದಿಕ್ಸೂಚಿ ಮೂಡಿದೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮೀಡಿಯಾ ಫೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಅವರು ಇಂದು (ಮಾ.09) ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶಯದಲ್ಲಿ ಆಯೋಜಿಸಿರುವ ಮೀಡಿಯಾ ಫೆಸ್ಟ್-2026 ರ ಸ್ಪರ್ಧೆಗಳನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮದ ಮುಂದೆ ಸಾಕಷ್ಟು ಹೊಸ ಸವಾಲುಗಳು ಎದುರಾಗುತ್ತಿವೆ. ತಂತ್ರಜ್ಞಾನದ ಜೊತೆಗೆ ಪತ್ರಿಕೋದ್ಯಮವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಅರಿಯಬೇಕಿದೆ. ಮುಂದಿನ ಆಗೋಹೋಗೋಗಳ ಬಗ್ಗೆ ಎಐ ಗುರುತಿಸುವುದಿಲ್ಲ. ಹೊಸ ರೀತಿಯ ತಂತ್ರಜ್ಞಾನದ ಟೂಲ್ ಬಳಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಡೀಪ್ ಫೇಕ್, ಫೇಕ್ ನ್ಯೂಸ್ ಸೇರಿದಂತೆ ಹಲವಾರು ಸವಾಲುಗಳು ಮಾಧ್ಯಮಗಳ ಮುಂದಿವೆ. ನವೀನ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬರೂ ಪತ್ರಕರ್ತರಾಗಬಹುದು ಎಂದು ಅವರು ತಿಳಿಸಿದರು.

ವಿದ್ಯುನ್ಮಾನ ಮಾಧ್ಯಮ ಬೆಳೆದಂತೆ ಮುದ್ರಣ ಮಾಧ್ಯಮವು ಗೌಣವಾಗುತ್ತಿದೆ. ಡಿಜಿಟಲ್ ಮಾಧ್ಯಮ ಎಲ್ಲವನ್ನೂ ಒಳಗೊಳ್ಳುತ್ತಿದೆ. ಪತ್ರಕರ್ತರಾಗ ಬಯಸುವವರು ಪತ್ರಿಕೋದ್ಯಮದ ಇತಿಹಾಸದೊಂದಿಗೆ ಹೊಸ ತಂತ್ರಜ್ಞಾನದ ಅರಿವು ಮತ್ತು ಅನುಭವ ಪಡೆದುಕೊಳ್ಳಬೇಕು. ಭಾವಿ ಪತ್ರಕರ್ತರಿಗೆ ಪಾಠದೊಂದಿಗೆ ವಾಸ್ತವಿಕ ತರಬೇತಿಯೂ ಮುಖ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಶ್ರೇಷ್ಠ ಮತ್ತು ಗೌರವದ ಸ್ಥಾನಮಾನ ಹೊಂದಿದೆ. ನಾಡಿನ ಇಂದಿನ ಅನೇಕ ಮಾಧ್ಯಮಗಳ ಮುಖ್ಯಸ್ಥರಾಗಿ, ಪ್ರಧಾನ ವರದಿಗಾರರಾಗಿ ಕವಿವಿ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದು ಕವಿವಿಯ ಹೆಮ್ಮೆಯಾಗಿದೆ. ವಿಶ್ವವಿದ್ಯಾಲಯವು ಪತ್ರಿಕೋದ್ಯಮ ವಿಭಾಗಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಮತ್ತು ಸೌಲಭ್ಯಗಳನ್ನು ನೀಡಿ ವಿಭಾಗದ ಉನ್ನತೀಕರಣಕ್ಕೆ ಸಹಕರಿಸಲಿದೆ ಎಂದು ಪ್ರೊ. ಎ.ಎಂ. ಖಾನ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಮಣ್ಯ ಅವರು ಮಾತನಾಡಿ, 1982ರಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ಪ್ರಾರಂಭವಾಯಿತು. ಧಾರವಾಡದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಹಲವು ಪತ್ರಿಕೆಗಳ ಸಂಪಾದಕರಾಗಿದ್ದಾರೆ. ಸುಮಾರು 500-600 ವಿದ್ಯಾರ್ಥಿಗಳು ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 20ನೇ ಶತಮಾನವನ್ನು ಪತ್ರಿಕೆಗಳ ಸುವರ್ಣಯುಗ ಎಂದು ಹೇಳಬಹುದು ಎಂದರು.

ಸ್ಯಾಟಲೈಟ್ ಟಿವಿ ಬಂದಾಗ ಪತ್ರಿಕೆಗಳಿಗೆ ಸ್ವಲ್ಪಮಟ್ಟಿಗೆ ಹೊಡೆತ ಬಿತ್ತು. ಹೊಸ ಹೊಸ ಮಾಧ್ಯಮಗಳಿಂದ ಪತ್ರಿಕೆಗಳು ಕಳೆಗುಂದಿದವು. ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಪತ್ರಿಕೆಗಳ ಜಾಹೀರಾತು ಕುಂಠಿತವಾಯಿತು. ಅದೇ ರೀತಿಯಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಕೆಲಸಗಳು ಆಗಲಿಲ್ಲ. ಡಿಜಿಟಲ್ ಪತ್ರಿಕೋದ್ಯಮ ಎಲ್ಲರಿಗೂ ಸುದ್ದಿಯನ್ನು ಬಿತ್ತರಿಸುವ ಸ್ವಾತಂತ್ರ್ಯ ನೀಡಿತು. ಯೂಟ್ಯೂಬ್, ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳು ನಾಗರೀಕರಿಗೆ ಸುದ್ದಿ ಬರೆಯುವ ಮತ್ತು ಬಿತ್ತರಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಿದವು ಎಂದರು.
ಇಂದು ಪತ್ರಿಕೆಗಳು ಮತ್ತು ನ್ಯೂಸ್ ಚಾನೆಲ್ಗಳು ಸಹ ಯೂಟ್ಯೂಬ್ ಚಾನೆಲ್ ತೆರೆಯುವ ಮೂಲಕ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ವಿದ್ಯಾರ್ಥಿಗಳು ಹೊಸ ಹೊಸ ಮಾಧ್ಯಮಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮ ಪ್ರಪಂಚ ಇಂದು ಹಲವಾರು ಬದಲಾವಣೆಗಳನ್ನು ಹೊಂದಿದೆ. ತಂತ್ರಜ್ಞಾನ ಬದಲಾದಂತೆ ನಾವು ಕೂಡ ಬದಲಾಗಬೇಕು ಎಂದು ಪ್ರೊ. ಎ.ಎಸ್. ಬಾಲಸುಬ್ರಮಣ್ಯ ಹೇಳಿದರು.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ನೂಲ್ವಿ ಮಾತನಾಡಿ, ಮಾಧ್ಯಮ ಓದುಗರು ದೊಡ್ಡ ವಿಷಯದ ಸುದ್ದಿಯನ್ನು ಮುಖ್ಯ ಶೀರ್ಷಿಕೆ ಓದಿ ಅರ್ಥೈಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾಕ್ಕೆ ಹೆಚ್ಚು ಪ್ರಾಧಾನ್ಯತೆ ದೊರೆತಿದೆ. ಸಾಮಾಜಿಕ ಮಾಧ್ಯಮಗಳು ವೇಗವಾಗಿ ಬೆಳವಣಿಗೆ ಹೊಂದಿವೆ. ಇಂದು ಪತ್ರಕರ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಾಹೀರಾತು ನೀತಿಯಿಂದ ಇಂದು ಪತ್ರಿಕೆಗಳು ಉಳಿದುಕೊಂಡಿವೆ. ಪತ್ರಿಕೋದ್ಯಮ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ ಎಂದು ಹೇಳಿದರು.
ಫೇಕ್ ನ್ಯೂಸ್ ಹರಡುತ್ತಿವೆ. ಫ್ಯಾಕ್ಟ್ ಚೆಕ್ ಚಾನೆಲ್ಗಳು ಆರಂಭವಾಗಿವೆ. ಪ್ರಾಮಾಣಿಕ ಪತ್ರಕರ್ತರು ಕಡಿಮೆಯಾಗುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಹೊಂದುವುದು ಅವಶ್ಯಕವಾಗಿದೆ. ಜನಪ್ರತಿನಿಧಿಗಳಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ಜನರನ್ನು ಜಾಗೃತಗೊಳಿಸುವ ಹೊಣೆ ಪತ್ರಕರ್ತರ ಮೇಲಿದೆ ಎಂದು ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು. ಆಯಾ ಕಾಲಕಾಲಕ್ಕೆ ಪತ್ರಕರ್ತರು ಬದಲಾವಣೆ ಹೊಂದಬೇಕು. ಪತ್ರಿಕೋದ್ಯಮ ನಾಲ್ಕು ಚಕ್ರದ ವಾಹನ ಇದ್ದಂತೆ. ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಪತ್ರಿಕೋದ್ಯಮ ವಿಭಾಗಗಳು, ವಾರ್ತಾ ಇಲಾಖೆ ಇವುಗಳಿಂದ ಪತ್ರಿಕೋದ್ಯಮ ಸುಸೂತ್ರವಾಗಿ ನಡೆಯುತ್ತಿದೆ. ಸಂವಿಧಾನ ಮತ್ತು ಕಾನೂನುಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಬೇಕು. ಹೊಸ ಹೊಸ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ನ್ಯೂಸ್ ಫಸ್ಟ್ ವರದಿಗಾರರಾದ ಶ್ರೀಕಾಂತ ಕುಬಕಡ್ಡಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಂಜಯಕುಮಾರ ಮಾಲಗತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಸವರಾಜ ಕಂಬಿ, ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ.ಎಂ. ಚಂದುನವರ, ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಭಾಕರ ಕಾಂಬಳೆ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಚಿದಾನಂದ ಕಮ್ಮಾರ, ಡಾ. ರವೀಂದ್ರ ಜಲರಡ್ಡಿ, ಡಾ. ಮಂಜುನಾಥ ಅಡಗಲ್ ಹಾಗೂ ಹಿರಿಯ ಪತ್ರಕರ್ತರಾದ ಬಸವರಾಜ ಹೊಂಗಲ್, ಎಂ.ಎನ್. ಮೂರ್ತಿ ಪ್ಯಾಟಿ, ಬಿ.ಜೆ. ಧನ್ಯಪ್ರಸಾದ, ನಿಜಗುಣಿ ದಿಂಡಲಕೊಪ್ಪ, ಮಂಜುನಾಥ ಅಂಗಡಿ, ಪರಮೇಶ ಅಂಗಡಿ, ಶ್ರೀಧರ ಮುಂಡರಗಿ, ಮಾಹಾಂತೇಶ ಕಣವಿ, ವಿಠ್ಠಲ ಕರಡಿಗುಡ್ಡ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು, ವಿವಿಧ ಪತ್ರಿಕೋದ್ಯಮ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.

