
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಮತ್ತು ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರವು ಭಾರಿ ಬೆಂಬಲ ನೀಡಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯ ಮೇರೆಗೆ, 2025-26ರ ಖಾರಿಫ್ (ಮುಂಗಾರು) ಋತುವಿನಲ್ಲಿ ಬೆಳೆದ ಪ್ರಮುಖ ಐದು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ (Price Support Scheme – PSS) ಖರೀದಿಸಲು ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ಕರ್ನಾಟಕದ ರೈತರಿಗೆ ಹೆಚ್ಚಿನ ಆದ್ಯತೆ ನೀಡಿದಂತಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೂಡಲೇ ಬೆಳೆಗಳ ಖರೀದಿಗೆ ಅನುಮೋದನೆ ದೊರಕಿದೆ. ಈ ಕುರಿತು ಪ್ರಹ್ಲಾದ ಜೋಶಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಖರೀದಿಯಾಗಲಿರುವ ಬೆಳೆಗಳು ಮತ್ತು ಪ್ರಮಾಣ:
- ಹೆಸರು ಕಾಳು: 38,000 ಮೆಟ್ರಿಕ್ ಟನ್ (MT)
- ಉದ್ದಿನ ಕಾಳು: 60,810 ಮೆಟ್ರಿಕ್ ಟನ್ (MT)
- ಸೂರ್ಯಕಾಂತಿ: 15,650 ಮೆಟ್ರಿಕ್ ಟನ್ (MT)
- ಕಡಲೆಬೀಜ (ಶೇಂಗಾ): 61,148 ಮೆಟ್ರಿಕ್ ಟನ್ (MT)
- ಸೋಯಾಬಿನ್: 1,15,000 ಮೆಟ್ರಿಕ್ ಟನ್ (MT)
ಕೇಂದ್ರದ ಅನುಮೋದನೆಯ ಹಿನ್ನೆಲೆಯಲ್ಲಿ, ಪ್ರಹ್ಲಾದ ಜೋಶಿಯವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ವಿನಂತಿಸಿದ್ದಾರೆ. ಇದರಿಂದ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರೈತಪರ ನಿಲುವು ಮತ್ತು ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಹ್ಲಾದ ಜೋಶಿಯವರು ಧನ್ಯವಾದಗಳನ್ನು ಅರ್ಪಿಸಿದರು. ಕೇಂದ್ರ ಸರ್ಕಾರದ ಈ ಸಮಯೋಚಿತ ನಿರ್ಧಾರವು ರಾಜ್ಯದ ರೈತರ ಹಿತ ಕಾಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.

