
ಅಹಮದಾಬಾದ್: ಗುಜರಾತ್‌ನಲ್ಲಿ ಭಾರಿ ಸಂಪುಟ ಪುನರ್ ರಚನೆಗೆ ಮುಂದಾಗಿರುವ ಬಿಜೆಪಿ ವರಿಷ್ಠ ಮಂಡಳಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ, ಹಾಲಿ ಸಂಪುಟದ ಎಲ್ಲಾ 16 ಸಚಿವರು ತಮ್ಮ ಸ್ಥಾನಗಳಿಗೆ ಗುರುವಾರ ಸಂಜೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದೆ. ಈ ಮೂಲಕ, ಇಡೀ ಸಂಪುಟವನ್ನೇ ವಿಸರ್ಜಿಸಿ, ಶುಕ್ರವಾರ (ಅಕ್ಟೋಬರ್ 17) ಸಂಪೂರ್ಣ ಹೊಸಬರಿಗೆ ಮಣೆ ಹಾಕಲು ಪಕ್ಷ ಸಿದ್ಧತೆ ನಡೆಸಿದೆ.
ಭೂಪೇಂದ್ರ ಪಟೇಲ್‌ಗೆ ಪರಮಾಧಿಕಾರ
ಗುರುವಾರ ಸಂಜೆ ನಡೆದ ಪ್ರಮುಖ ಬೆಳವಣಿಗೆಯಲ್ಲಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟ ದರ್ಜೆಯ 8 ಸಚಿವರು ಮತ್ತು ರಾಜ್ಯ ಸಚಿವರಾದ 8 ಮಂದಿ ತಮ್ಮ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಹಸ್ತಾಂತರಿಸಿದರು. ಮುಖ್ಯಮಂತ್ರಿಯವರೇ ಈ ರಾಜೀನಾಮೆಗಳನ್ನು ಅಂಗೀಕರಿಸಿದ್ದು, ಈ ಮೂಲಕ ಹಳೆಯ ಸಂಪುಟಕ್ಕೆ ಬಹುತೇಕ ಸಂಪೂರ್ಣ ತೆರೆ ಬಿದ್ದಿದೆ.
ಗುಜರಾತ್ ವಿಧಾನಸಭೆ ಚುನಾವಣೆಗೆ (2027) ಇನ್ನು ಸಾಕಷ್ಟು ಸಮಯವಿದ್ದರೂ, ಇತ್ತೀಚೆಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಿರುವ ಹಿನ್ನೆಲೆ ಹಾಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಮತ್ತು ಯುವ ನಾಯಕತ್ವವನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ.
ನಾಳೆ ಪ್ರಮಾಣವಚನ: 22-23 ಸದಸ್ಯರ ಸಂಪುಟ?
ಹೊಸ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭ ಶುಕ್ರವಾರ ಮಧ್ಯಾಹ್ನ 12.39ಕ್ಕೆ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯಲಿದೆ. ಭೂಪೇಂದ್ರ ಪಟೇಲ್ ಸಂಪೂರ್ಣವಾಗಿ ಸಚಿವ ಸಂಪುಟವನ್ನು ಪುನರ್ ರಚಿಸಿ, ಕನಿಷ್ಠ 22 ರಿಂದ 23 ಸದಸ್ಯರನ್ನು ಒಳಗೊಂಡ ವಿಸ್ತೃತ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.
ಸದ್ಯ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಗರಿಷ್ಠ 27 ಮಂತ್ರಿಗಳ ನೇಮಕಕ್ಕೆ ಅವಕಾಶವಿದೆ. ಬಹುತೇಕ ಹಾಲಿ ಸಚಿವರಿಗೆ ‘ವಿಶ್ರಾಂತಿ’ ನೀಡಿ, ಎಲ್ಲಾ ಪ್ರಾದೇಶಿಕ ಮತ್ತು ಸಾಮಾಜಿಕ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯ ಮೇರೆಗೆ ಈ ದಿಢೀರ್ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ, ರಾಜ್ಯದಲ್ಲಿ ಪಕ್ಷದ ಆಡಳಿತ ಮತ್ತು ಸಂಘಟನೆಯ ನಡುವೆ ಸಮನ್ವಯ ಸಾಧಿಸಲು ಪಕ್ಷ ಮುಂದಾಗಿದೆ.
ರಾಜೀನಾಮೆ ನೀಡಿರುವ ಅನೇಕ ಹಿರಿಯ ಸಚಿವರಿಗೆ ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಇದೆ.

