ಮಸ್ಕಿ: ಹಳ್ಳ ದಾಟುವ ವೇಳೆ ದುರಂತ; ರೈತನ ಎತ್ತು, ಟಗರು ಕೊಚ್ಚಿಹೋಗಿ ನಾಪತ್ತೆ

Spread the love

ಮಸ್ಕಿ: ಹಳ್ಳ ದಾಟುವ ವೇಳೆ ದುರಂತ; ರೈತನ ಎತ್ತು, ಟಗರು ಕೊಚ್ಚಿಹೋಗಿ ನಾಪತ್ತೆ

ಮಸ್ಕಿ: ತಾಲ್ಲೂಕಿನ ಪಟ್ಟಣದಲ್ಲಿರುವ ಹಿರೇಹಳ್ಳವನ್ನು ದಾಟುವಾಗ ಸಂಭವಿಸಿದ ದುರಂತದಲ್ಲಿ ರೈತನೋರ್ವನ ಎತ್ತು, ಎತ್ತಿನ ಬಂಡಿ ಮತ್ತು ಎರಡು ಟಗರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆ ಮಂಗಳವಾರ ನಡೆದಿದೆ.
‌‌‌‌ಪಟ್ಟಣದ ಸಂತೆ ಬಜಾರ್‌ನಿಂದ ಸ್ಮಶಾನದ ಕಡೆಗೆ ಸಾಗುವ ರಸ್ತೆಯಲ್ಲಿ ರೈತನೊಬ್ಬ ತನ್ನ ಎತ್ತಿನ ಬಂಡಿಯಲ್ಲಿ ಹಳ್ಳ ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಈ ಭಾಗದಲ್ಲಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಒಂದು ಎತ್ತು, ಎತ್ತಿನ ಬಂಡಿ ಮತ್ತು ಅದರ ಜೊತೆಗಿದ್ದ ಎರಡು ಟಗರುಗಳು ನೀರಿನ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗಿವೆ. ಅದೃಷ್ಟವಶಾತ್, ಹಳ್ಳದ ದಡದಲ್ಲಿದ್ದ ಗಿಡಗಂಟಿಗಳಲ್ಲಿ ಸಿಲುಕಿಕೊಂಡಿದ್ದ ಇನ್ನೊಂದು ಎತ್ತು ಮತ್ತು ರೈತನನ್ನು ಸಾರ್ವಜನಿಕರು ಹಗ್ಗದ ಸಹಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
‌‌‌‌ ಈ ರಸ್ತೆಯ ಮೂಲಕ ಜಮೀನುಗಳಿಗೆ ತೆರಳಿದರೆ ಹತ್ತಾರು ಕಿಲೋಮೀಟರ್ ದೂರವಾಗುತ್ತದೆ. ಆದರೆ, ಈ ಹಳ್ಳ ದಾಟಿ ಸಾಗಿದರೆ ಸಮೀಪದ ಮಾರ್ಗ ದೊರೆಯುವುದರಿಂದ ರೈತರು ಇದೇ ಮಾರ್ಗವನ್ನು ಬಳಸುತ್ತಿದ್ದರು. ಹೀಗೆ ನಡೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಸಾರ್ವಜನಿಕರು ಡ್ರೋನ್ ಕ್ಯಾಮೆರಾದ ಸಹಾಯದಿಂದ ಕೊಚ್ಚಿಹೋದ ಎತ್ತು ಮತ್ತು ಟಗರುಗಳಿಗಾಗಿ ಹುಡುಕಾಟ ನಡೆಸಿದರೂ, ಅವುಗಳ ಸುಳಿವು ಪತ್ತೆಯಾಗಿಲ್ಲ. ಈ ಘಟನೆಯಿಂದ ರೈತ ಕಡು ಬಡತನದಲ್ಲಿದ್ದು, ಅಪಾರ ನಷ್ಟ ಅನುಭವಿಸಿದ್ದಾನೆ. ಆದ್ದರಿಂದ, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತನಿಗೆ ಸೂಕ್ತ ಧನಸಹಾಯ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ರಸ್ತೆಗೆ ಸೇತುವೆ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *