
ಬೆಳ್ತಂಗಡಿ: ಯೂಟ್ಯೂಬರ್ ಸಮೀರ್ ಎಂ.ಡಿ. ಅವರಿಗೆ ಮಂಗಳೂರು ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದರೂ, ಧರ್ಮಸ್ಥಳ ಪೊಲೀಸರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಪೊಲೀಸರು ಅವರ ನಿವಾಸಗಳಿಗೆ ನೋಟಿಸ್ ಅಂಟಿಸಿದ್ದಾರೆ. ವಿಚಾರಣೆಗೆ ಗೈರಾದ ಕಾರಣ ಸಮೀರ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಧರ್ಮಸ್ಥಳ ಪೊಲೀಸರ ಒಂದು ತಂಡವು ಆಗಸ್ಟ್ 22ರ ಶುಕ್ರವಾರದಂದು ಸಮೀರ್ ಅವರು ನ್ಯಾಯಾಲಯಕ್ಕೆ ನೀಡಿದ್ದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಹಟ್ಟಿಯ ವಿಳಾಸಕ್ಕೆ ತೆರಳಿದಾಗ, ಮನೆಗೆ ಬೀಗ ಹಾಕಿತ್ತು. ಇದರಿಂದ ಪೊಲೀಸರು ನೋಟಿಸ್ ಅನ್ನು ಮನೆ ಗೋಡೆಗೆ ಅಂಟಿಸಿದ್ದಾರೆ. ಮತ್ತೊಂದು ತಂಡವು ಬೆಂಗಳೂರಿನ ಜಿಗಣಿಯಲ್ಲಿರುವ ಹುಲ್ಲಹಳ್ಳಿ ಬಾಡಿಗೆ ಮನೆಗೆ ಹೋದಾಗ ಅಲ್ಲಿಯೂ ಬೀಗ ಹಾಕಲಾಗಿತ್ತು. ಅಲ್ಲಿಯೂ ನೋಟಿಸ್ ಅನ್ನು ಗೋಡೆಗೆ ಅಂಟಿಸಲಾಗಿದೆ.
ಪೊಲೀಸರು ಸಮೀರ್ ಅವರ ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ಆಗಸ್ಟ್ 24ರಂದು ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ತನಿಖೆಗೆ ಹಾಜರಾಗಲು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.
ಸಮೀರ್ ಅವರು ವಿಚಾರಣೆಗೆ ಹಾಜರಾಗದಿದ್ದಲ್ಲಿ, ಪೊಲೀಸರು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಮತ್ತು ಅವರನ್ನು ಬಂಧಿಸಲು ಅನುಮತಿ ಪಡೆಯುವ ಸಾಧ್ಯತೆಗಳಿವೆ.

