
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ‘ಮಾಸ್ಕ್ ಮ್ಯಾನ್’ ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಅವರನ್ನು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿದೆ. ತನಿಖೆ ವೇಳೆ ತಾನು ‘ಪಾತ್ರಧಾರಿ’ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂದು ಆರೋಪಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ ಎಂದು ತಿಳಿದುಬಂದಿದೆ.
ದೂರುದಾರ ಚಿನ್ನಯ್ಯ ತಾನು ತಂದಿದ್ದ ತಲೆಬುರುಡೆಯನ್ನು ಇಟ್ಟುಕೊಂಡು ನ್ಯಾಯಾಲಯದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದ. ಇದರಿಂದಾಗಿ ಆತನ ಮಾತಿನಂತೆ ಎಸ್ಐಟಿ ತಂಡವು 17 ಸ್ಥಳಗಳಲ್ಲಿ ಭೂಮಿಯನ್ನು ಅಗೆಸಿ ಪರಿಶೀಲನೆ ನಡೆಸಿತ್ತು. ಆದರೆ, ಆತನ ಹೇಳಿಕೆಗಳು ಸುಳ್ಳು ಎಂದು ದೃಢಪಟ್ಟ ನಂತರ ಎಸ್ಐಟಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದೆ.
ಮಣ್ಣಿನಿಂದ ಬಯಲಾದ ಸುಳ್ಳು:
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ, ತಲೆಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದಲ್ಲ ಎಂದು ಸಾಬೀತಾಗಿತ್ತು. ಇದು ತನಿಖೆಯ ದಿಕ್ಕನ್ನೇ ಬದಲಾಯಿಸಿತು. ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ, ಆತ ಬೇರೆ ಜಾಗದಿಂದ ತಲೆಬುರುಡೆ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. “ಬೇರೆಯವರು ಹೇಳಿದಂತೆ ನಾನು ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದೇನೆ,” ಎಂದು ಆತ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
‘ಸೂತ್ರಧಾರಿಗಳು ಬೇರೆಯೇ ಇದ್ದಾರೆ’: ಆತಂಕಕಾರಿ ಹೇಳಿಕೆ
“ನಾನು ಕೇವಲ ಒಬ್ಬ ಪಾತ್ರಧಾರಿ. ಈ ಎಲ್ಲ ಘಟನೆಯ ಹಿಂದೆ ದೊಡ್ಡ ಸೂತ್ರಧಾರಿಗಳಿದ್ದಾರೆ,” ಎಂದು ಚಿನ್ನಯ್ಯ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾನೆ. “ನನಗೆ ಈ ರೀತಿ ಹೇಳಲು ಸೂಚಿಸಿದ್ದರು, ನಾನು ಅದೇ ರೀತಿ ಹೇಳಿದೆ. ತಲೆಬುರುಡೆ ತೆಗೆದುಕೊಂಡು ಹೋಗಿ ಕೋರ್ಟ್ಗೆ ಒಪ್ಪಿಸುವಂತೆ ಹೇಳಿದರು, ನಾನು ಅದನ್ನೇ ಮಾಡಿದೆ. ಆದರೆ, ಈ ಬುರುಡೆ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ,” ಎಂದು ಆರೋಪಿ ಚೆನ್ನ ಹೇಳಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡವು ಎಸ್ಐಟಿ ಠಾಣೆಯಲ್ಲಿ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯ ನಂತರ ಆರೋಪಿಯನ್ನು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

