ಮಂಡ್ಯ: ಮದ್ದೂರಿನಲ್ಲಿ ಬಿಗಿ ಭದ್ರತೆಯಲ್ಲಿ ಗಣೇಶ ವಿಸರ್ಜನೆ; ಬಿಜೆಪಿ, ಜೆಡಿಎಸ್ ನಾಯಕರಿಂದ ಸರ್ಕಾರದ ವಿರುದ್ಧ ವಾಗ್ದಾಳಿ

Spread the love

ಮಂಡ್ಯ:ಮದ್ದೂರು: ಕಳೆದ ವಾರ ಕಲ್ಲು ತೂರಾಟದ ಘಟನೆಯಿಂದ ಉದ್ವಿಗ್ನಗೊಂಡಿದ್ದ ಮದ್ದೂರು ಪಟ್ಟಣದಲ್ಲಿ ಇಂದು (ಬುಧವಾರ, ಸೆ. 10) ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಹಿಂದೂ ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಬಿಜೆಪಿ, ಜೆಡಿಎಸ್ ನಾಯಕರಿಂದ ವಾಗ್ದಾಳಿ:
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಸಿ.ಟಿ. ರವಿ, ಮಾಜಿ ಸಂಸದೆ ಸುಮಲತಾ ಅಂಬರೀಶ್, ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸಿ.ಟಿ. ರವಿ ಕಿಡಿ:
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. “ಮಸೀದಿ ಮುಂದೆ ಗಣೇಶ ಮೆರವಣಿಗೆ ಬರಬಾರದು ಎನ್ನುವಷ್ಟು ಧಾಷ್ಟ್ರತನವನ್ನು ತೋರಿಸಬೇಡಿ. ನಮಗೆ ತೊಡೆ ತಟ್ಟುವ ಕೆಲಸ ಮಾಡಬೇಡಿ, ಎಲ್ಲವನ್ನೂ ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಕೇವಲ ಮುಸ್ಲಿಮರ ಮತಗಳಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಮುಸ್ಲಿಮರಿಗೆ ಏನೂ ಆಗಬಾರದು ಎನ್ನುವ ಮಾನಸಿಕತೆಯಿಂದ ಹೊರಬರಬೇಕು” ಎಂದು ವಾಗ್ದಾಳಿ ನಡೆಸಿದರು. “ಪಾಕಿಸ್ತಾನ ಜಿಂದಾಬಾದ್ ಎನ್ನುವವರ ಪರವಾಗಿ ನಿಲ್ಲುವುದಾದರೆ ಗಂಟುಮೂಟೆ ಕಟ್ಟಿ” ಎಂದು ಸವಾಲೆಸೆದರು.
“ಸಾಗರದಲ್ಲಿ ಪುಟ್ಟ ಮಕ್ಕಳು ಗಣೇಶನ ವಿಗ್ರಹದ ಮೇಲೆ ಎಂಜಲು ಉಗಿಯುತ್ತಾರೆ, ಆ ಮಾನಸಿಕತೆ ಹುಟ್ಟು ಹಾಕಿದವರು ಯಾರು? ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರೂ ಶಾಸಕರು ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ’ ಎಂದು ಹೇಳುತ್ತಾರೆ. ಇಸ್ಲಾಂನಲ್ಲಿ ಪುನರ್ ಜನ್ಮ ಇಲ್ಲ, ಮುಂದಿನ ಜನ್ಮದಲ್ಲಿ ನಾಯಿಯಾಗುತ್ತೀರೋ, ಹಂದಿಯಾಗುತ್ತೀರೋ ಗೊತ್ತಿಲ್ಲ. ಬಸವಣ್ಣನವರಿಗೆ ಮತ್ತು ಸನಾತನ ಧರ್ಮಕ್ಕೆ ಅವಮಾನ ಮಾಡಬೇಡಿ, ಈ ಜನ್ಮದಲ್ಲೇ ಮುಸ್ಲಿಂ ಆಗಿಬಿಡಿ” ಎಂದು ಸಿ.ಟಿ. ರವಿ ಪ್ರಚೋದನಕಾರಿ ಹೇಳಿಕೆ ನೀಡಿದರು.

ಆರ್. ಅಶೋಕ್ ತೀವ್ರ ವಾಗ್ದಾಳಿ:
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣದಲ್ಲಿ ನಿರತವಾಗಿದೆ. ಅದನ್ನು ಕಿತ್ತೊಗೆಯಲು ನಾವೆಲ್ಲ ಒಂದಾಗಿದ್ದು, ಇನ್ನು ಮುಂದೆ ನಮ್ಮದೇ ಹವಾ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿದರೆ ಗಣೇಶ ಹಬ್ಬವನ್ನೇ ಬ್ಯಾನ್ ಮಾಡುತ್ತಾರೆ. ಮದ್ದೂರು ವಡೆಗೆ ಪ್ರಸಿದ್ಧ, ಆದರೆ ಇದೇ ವರ್ತನೆ ಮುಂದುವರಿಸಿದರೆ ಜನರು ತಲೆಯ ಮೇಲೆಯೇ ವಡೆ ತಟ್ಟುತ್ತಾರೆ” ಎಂದು ಎಚ್ಚರಿಸಿದರು.

ಇತರ ನಾಯಕರ ಅಭಿಪ್ರಾಯ:
ಮಾಜಿ ಸಂಸದೆ ಸುಮಲತಾ ಅಂಬರೀಶ್ “ಸಮರ್ಥ ನಾಯಕತ್ವದ ಕೊರತೆಯಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಬಿಟ್ಟಿ ಭಾಗ್ಯಗಳಿಗೆ ಮರುಳಾದ ಕಾರಣ ಈ ಪರಿಸ್ಥಿತಿ ಎದುರಾಗಿದೆ” ಎಂದು ದೂರಿದರು.
ಮಾಜಿ ಶಾಸಕ ಡಿ.ಸಿ. ತಮ್ಮಣ್ಣ “ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು 500 ಹಿಂದೂಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಮ್ಮೆಲ್ಲರ ಮೇಲೆ ಕೇಸ್ ದಾಖಲಿಸಿ, ನಾವೆಲ್ಲ ಜೈಲಿಗೂ ಹೋಗಲು ಸಿದ್ಧ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಎಚ್.ಡಿ. ಕುಮಾರಸ್ವಾಮಿ ಬಂದ ನಂತರ ಶಾಂತಿ ಯಾತ್ರೆ ನಡೆಸುವುದಾಗಿ ಅವರು ತಿಳಿಸಿದರು.

ಮೆರವಣಿಗೆ ಮತ್ತು ಭದ್ರತೆ:
ಸುಮಾರು 28 ಗಣೇಶ ಮೂರ್ತಿಗಳ ಮೆರವಣಿಗೆ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ, ಗಲಭೆ ಪೀಡಿತ ಪೇಟೆ ಬೀದಿ ಮಾರ್ಗವಾಗಿ ಸಾಗಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 2000ಕ್ಕೂ ಹೆಚ್ಚು ಪೊಲೀಸರು, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಿದ್ದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಬರುವ ಮಸೀದಿಗಳಿಗೂ ಭದ್ರತೆ ಒದಗಿಸಲಾಗಿತ್ತು.

Leave a Reply

Your email address will not be published. Required fields are marked *