ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಚಾಕು ಇರಿತ: ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

Spread the love

ಹುಬ್ಬಳ್ಳಿ: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಬಿಡನಾಳ ಮಾರುತಿ ನಗರದ ನಿವಾಸಿ ಪ್ರತಾಪಗೌಡ ಅಲಿಯಾಸ್ ಚೇತನಗೌಡ ಕುಮಾರಗೌಡಗೌಡರ (30) ಎಂಬುವವರು ಚಾಕು ಇರಿತಕ್ಕೊಳಗಾದ ಯುವಕ. ಕೊಪ್ಪಿಕರ ರಸ್ತೆಯ ಮಿಠಾಯಿ ಅಂಗಡಿಯ ಬಳಿ ಈ ಘಟನೆ ನಡೆದಿದೆ. ಪ್ರತಾಪಗೌಡ ಅವರ ಎದೆ ಮತ್ತು ಕೆಳ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ನಗರದ ಶಿರಿ, ಕೃಷ್ಣ ಹಾಗೂ ಶಿವ ಎಂಬುವವರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ. ಪ್ರತಾಪಗೌಡ ಅವರು ಟ್ರಾನ್ಸ್‌ಪೋರ್ಟ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪೊಲೀಸರಿಂದ ತನಿಖೆ ಚುರುಕು
ಘಟನೆಯ ಮಾಹಿತಿ ಪಡೆದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಶಿವಪ್ರಕಾಶ ನಾಯ್ಕ ಮತ್ತು ಉಮೇಶ ಚಿಕ್ಕಮಠ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತ ಎನ್. ಶಶಿಕುಮಾರ್, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿದರು. ಈ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮತ್ತೊಂದು ದುರಂತ: ಟ್ರ್ಯಾಕ್ಟರ್ ರಾಡ್ ಹೊಟ್ಟೆಗೆ ಇರಿದು ಯುವಕ ಗಂಭೀರ

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಮತ್ತೊಂದು ದುರಂತದಲ್ಲಿ ಟ್ರ್ಯಾಕ್ಟರ್‌ಗೆ ಅಳವಡಿಸಲಾದ ರಾಡ್ ಹೊಟ್ಟೆಗೆ ತಾಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ನಗರದ ದಾಜಿಬಾನ ಪೇಟೆಯಲ್ಲಿ ನಡೆದಿದೆ.

ಇಲ್ಲಿನ ಚನ್ನಪೇಟೆಯ ನಿವಾಸಿ ಪ್ರಶಾಂತ್ ಕಠಾರೆ (33) ಗಾಯಗೊಂಡವರು. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಅಕಸ್ಮಾತ್ತಾಗಿ ಈ ದುರ್ಘಟನೆ ಸಂಭವಿಸಿದೆ. ಪ್ರಶಾಂತ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ಅವರ ಸಂಬಂಧಿ ಶ್ರೀನಿವಾಸ ತಿಳಿಸಿದ್ದಾರೆ.

Leave a Reply

Your email address will not be published. Required fields are marked *