

ಯಾದಗಿರಿ: ಹುಣಸಗಿ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ನಡೆದ ಇಸ್ಪೀಟ್ ಜೂಜು ಅಡ್ಡೆ ಮೇಲಿನ ದಾಳಿಯಿಂದಾಗಿ ಭಯಭೀತಗೊಂಡು ಓಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶನಿವಾರ ವಜ್ಜಲ್ ಗ್ರಾಮದಲ್ಲಿ ನಡೆದಿದೆ.
ಘಟನೆ ಖಂಡಿಸಿ ಮೃತರ ಸಂಬಂಧಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರನ್ನು ಸುರಪುರ ತಾಲೂಕಿನ ಮುಷ್ಠಳ್ಳಿ ಗ್ರಾಮದವರಾದ ಮಂಜುನಾಥ್ (43) ಎಂದು ಗುರುತಿಸಲಾಗಿದೆ. ಅವರು ಹಲವು ವರ್ಷಗಳಿಂದ ತಮ್ಮ ಪತ್ನಿಯ ತವರು ಮನೆಯಾದ ವಜ್ಜಲ್ ಗ್ರಾಮದಲ್ಲಿಯೇ ನೆಲೆಸಿದ್ದರು ಎಂದು ಹೇಳಲಾಗಿದೆ.
ಪೊಲೀಸ್ ವಿರುದ್ಧ ಸಂಬಂಧಿಕರ ಆಕ್ರೋಶ
ವ್ಯಕ್ತಿ ಸಾವಿಗೆ ಪೊಲೀಸ್ ಅಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿ, ನೂರಾರು ಸಂಖ್ಯೆಯ ಸಂಬಂಧಿಕರು ಹುಣಸಗಿ ಪೊಲೀಸ್ ಠಾಣೆಯ ಎದುರು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಜಮಾಯಿಸಿದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಪೊಲೀಸ್ ಅಧಿಕಾರಿಗಳು ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ತಮ್ಮ ಧರಣಿಯನ್ನು ನಿಲ್ಲಿಸಲಿಲ್ಲ. ರಾತ್ರಿ 11 ಗಂಟೆಯವರೆಗೂ ಪ್ರತಿಭಟನೆ ಮುಂದುವರಿದಿದ್ದು, ಪೊಲೀಸ್ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

