ಮಹರ್ಷಿ ಅರವಿಂದರು ಪೂರ್ಣಯೋಗ ಮಾರ್ಗದ ಪ್ರವರ್ತಕ: ಡಾ. ಅರವಿಂದ ಯಾಳಗಿ

Spread the love

ಧಾರವಾಡ: ಮಹರ್ಷಿ ಶ್ರೀ ಅರವಿಂದರು ಜಗತ್ತಿಗೆ ಪೂರ್ಣಯೋಗ ಮಾರ್ಗವನ್ನು ಪರಿಚಯಿಸಿದ ಮಹಾಯೋಗಿಯಾಗಿದ್ದಾರೆ ಎಂದು ಗೋವಾದ ಇಂಡೋ-ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಅರವಿಂದ ಯಾಳಗಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀ ಗುರಪ್ಪನವರು ಮತ್ತು ಶ್ರೀಮತಿ ಗೌರಮ್ಮ ಬೆಲ್ಲದ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಮಹರ್ಷಿ ಶ್ರೀ ಅರವಿಂದರ ತತ್ವದರ್ಶನ’ ಕುರಿತು ಉಪನ್ಯಾಸ ನೀಡಿದ ಅವರು, ಅರವಿಂದರು ಒಬ್ಬ ಮಹಾನ್ ತತ್ವಜ್ಞಾನಿ, ಶಿಕ್ಷಣ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದರು.

ಏಳನೇ ವಯಸ್ಸಿಗೆ ಪಾಶ್ಚಾತ್ಯ ಸಂಸ್ಕೃತಿಯ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ ಅವರು, ಅಲ್ಲಿ ೧೪ ವರ್ಷಗಳ ಕಾಲ ಅಧ್ಯಯನ ನಡೆಸಿ, ೭ ಪಾಶ್ಚಾತ್ಯ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯ ಕೊನೆಯ ಪರೀಕ್ಷೆಯನ್ನು ಎದುರಿಸದೆ ಅನರ್ಹರಾದರು ಎಂದು ಹೇಳಿದರು.

ಅರವಿಂದರು ಬರೋಡಾ ಮಹಾರಾಜರ ಪರಿಚಯದಿಂದ ಭಾರತಕ್ಕೆ ಮರಳಿ, ಅವರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಂಗಾಲಿ, ಸಂಸ್ಕೃತ, ಮತ್ತು ಹಿಂದಿ ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅವರು ರಚಿಸಿದ ‘ಸಾವಿತ್ರಿ’ ಮಹಾಕಾವ್ಯವು ಮಾನವೀಯತೆಯ ಶ್ರೇಷ್ಠ ಕೃತಿಯಾಗಿದೆ. ಪಾಶ್ಚಾತ್ಯ ಮತ್ತು ಭಾರತೀಯ ತತ್ವಜ್ಞಾನಗಳನ್ನು ಪರಾಮರ್ಶಿಸಿ, ತಮ್ಮದೇ ಆದ ವೈಜ್ಞಾನಿಕ ಯೋಗ ತತ್ವವನ್ನು ಅವರು ಜಗತ್ತಿಗೆ ಪರಿಚಯಿಸಿದರು ಎಂದು ಡಾ. ಅರವಿಂದ ಯಾಳಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಕನ್ನಡದ ದಿಗ್ಗಜ ಕವಿಗಳಾದ ಮಧುರ ಚೆನ್ನ, ಬೇಂದ್ರೆ, ಮತ್ತು ಗೋಕಾಕರಂತಹ ಮೇಧಾವಿಗಳು ಅರವಿಂದರ ತತ್ವಗಳಿಂದ ಪ್ರಭಾವಿತರಾಗಿದ್ದರು. ಅರವಿಂದರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮತ್ತು ಶ್ರೀಮತಿ ಲೀಲಾವತಿ ಬೆಲ್ಲದ ಉಪಸ್ಥಿತರಿದ್ದರು. ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರೆ, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು ಮತ್ತು ವೀರಣ್ಣ ಒಡ್ಡೀನ ವಂದಿಸಿದರು. ಈ ಸಂದರ್ಭದಲ್ಲಿ ಬೆಲ್ಲದ ಕುಟುಂಬಸ್ಥರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *