ಕರ್ನಾಟಕದ ನೂತನ ಡಿಜಿ, ಐಜಿಪಿಯಾಗಿ ಎಂ.ಎ. ಸಲೀಂ ನೇಮಕ

Spread the love

ಬೆಂಗಳೂರು: ಕರ್ನಾಟಕದ ನೂತನ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಆಗಿ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಮಯದಲ್ಲಿ ಸಿ ಎಂ ಸಿದ್ದರಾಮಯ್ಯನವರು ಅಭಿನಂದಿಸಿದರು.

ಈ ಕುರಿತು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ನೀಡಿರುವ ಭರವಸೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಡಾ. ಎಂ.ಎ. ಸಲೀಂ ಅವರನ್ನು ರಾಜ್ಯದ ಡಿಜಿಪಿಯಾಗಿ ನೇಮಕ ಮಾಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಯುಪಿಎಸ್‌ಸಿ (UPSC) ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಒಂದು ವಾರದೊಳಗೆ ಖಾಯಂ ಡಿಜಿಪಿ ನೇಮಕ ಮಾಡಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ಭರವಸೆ ನೀಡಿತ್ತು. ಅದರಂತೆ, 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಸಲೀಂ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ.

ಈ ಹಿಂದೆ ಅಲೋಕ್ ಮೋಹನ್ ಅವರು ನಿವೃತ್ತರಾದ ಬಳಿಕ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿದ್ದ ಡಾ. ಸಲೀಂ ಅವರು, ಈ ನೇಮಕದೊಂದಿಗೆ ರಾಜ್ಯದ ಕಾಯಂ ಡಿಜಿ, ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಸಿಐಡಿಯ ಡಿಜಿಪಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ಸರ್ಕಾರ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಆಗಸ್ಟ್ 26ರಂದು ನಡೆದ ಕೇಂದ್ರ ಲೋಕಸೇವಾ ಆಯೋಗದ ಆಯ್ಕೆ ಸಮಿತಿಯ ಸಭೆಯ ಶಿಫಾರಸುಗಳನ್ನು ಆಧರಿಸಿ ಶೀಘ್ರವೇ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದರು. ಇದರ ನಂತರ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತ್ತು.

ಪೊಲೀಸ್ ನಿಯಮಗಳು 2016ರ ಪ್ರಕಾರ, ಈ ಹುದ್ದೆಯು ಅಪೆಕ್ಸ್ ಸ್ಕೇಲ್, ಹಂತ-17ರ ಅಡಿಯಲ್ಲಿ ನಿಗದಿತ ವೇತನವನ್ನು ಹೊಂದಿದೆ. ಮುಂದಿನ ಆದೇಶದವರೆಗೆ ಡಾ. ಸಲೀಂ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *