ಸೆ:13 ರಂದು ಲೋಕ ಅದಾಲತ್ ಹಾಗೂ ಸಂಚಾರಿ ದಂಡ ರಿಯಾಯಿತಿ ಸದ್ಬಳಕೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ. ಎಸ್ ಭಾರತಿ ಕರೆ

Spread the love

ಧಾರವಾಡ: ಸೆಪ್ಟೆಂಬರ್ 13 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಕಕ್ಷಿದಾರರು ಮತ್ತು ನ್ಯಾಯವಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ಅವರು ತಿಳಿಸಿದ್ದಾರೆ. ಜೊತೆಗೆ, ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸಲಾಗಿರುವ ದಂಡದ ಮೊತ್ತದಲ್ಲಿ ಶೇ. 50 ರಿಯಾಯಿತಿಯನ್ನು ಬಳಸಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜುಲೈ 1 ರಿಂದ ಅಕ್ಟೋಬರ್ 7 ರವರೆಗೆ ದೇಶಾದ್ಯಂತ ‘ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ’ ಎಂಬ 90 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಇದರ ಭಾಗವಾಗಿ, ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಪ್ರಕರಣಗಳ ಸ್ಥಿತಿಗತಿ
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಜುಲೈ 1 ರವರೆಗೆ ಒಟ್ಟು 28,358 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ 725 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಗುರುತಿಸಲಾಗಿದ್ದು, 328 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ. ಈವರೆಗೆ 66 ಪ್ರಕರಣಗಳನ್ನು ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಂತರ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಅವರು ಮಾತನಾಡಿ ಲೋಕ ಅದಾಲತ್‌ನಲ್ಲಿ ಭಾಗವಹಿಸುವುದರಿಂದ ಅನಗತ್ಯ ವಿಳಂಬ ಮತ್ತು ವೆಚ್ಚ ತಪ್ಪುತ್ತದೆ. ಅಲ್ಲದೆ, ಕಕ್ಷಿದಾರರು ನೇರವಾಗಿ ಸಂಧಾನಕಾರರೊಂದಿಗೆ ಮಾತನಾಡಿ ಒಮ್ಮತಕ್ಕೆ ಬರುವ ಅವಕಾಶವಿರುವುದರಿಂದ ಕಾನೂನು ಪ್ರಕ್ರಿಯೆಯ ಸಂಕೀರ್ಣತೆ ಕಡಿಮೆಯಾಗುತ್ತದೆ ಎಂದು ಹೇಳಿದರು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ನ್ಯಾಯಾಂಗದ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡುವ ಜೊತೆಗೆ, ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸುವಲ್ಲಿ ಸಹಕಾರಿಯಾಗಿದೆ ಎಂದರು.

Leave a Reply

Your email address will not be published. Required fields are marked *