‘ಪರದೆ ಮೇಲಿನಷ್ಟೇ ನಿಜಜೀವನದಲ್ಲೂ ಮೌಲ್ಯಯುತವಾಗಿ ಬದುಕಿ’: ನಟರಿಗೆ ಸಿಎಂ ಸಿದ್ದರಾಮಯ್ಯ ಕರೆ; 160 ಎಕರೆಯಲ್ಲಿ ಚಿತ್ರನಗರಿ ಆರಂಭಕ್ಕೆ ಸಿದ್ಧತೆ

Spread the love

ಮೈಸೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರಿನ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಿನಿಮಾ ಮತ್ತು ಸಮಾಜದ ಮೇಲೆ ಅದರ ಪರಿಣಾಮ ಕುರಿತು ಮಾತನಾಡಿದರು.

ಡಾ. ರಾಜ್‌ಕುಮಾರ್ ಆದರ್ಶ ಮೌಲ್ಯಗಳು

“ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ ಜೀವನದಲ್ಲೂ ನಡೆದುಕೊಳ್ಳಬೇಕು. ಡಾ. ರಾಜ್‌ಕುಮಾರ್ ಅವರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು. ಈ ಕಾರಣಕ್ಕೇ ಅವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ,” ಎಂದು ಸಿಎಂ ಸಿದ್ದರಾಮಯ್ಯ ಅವರು ಕನ್ನಡದ ಮೇರು ನಟನನ್ನು ಸ್ಮರಿಸಿದರು. ಸಿನಿಮಾ ಅತ್ಯಂತ ಪ್ರಭಾವೀ ಮಾಧ್ಯಮ ಆಗಿದ್ದು, ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ನಟರು ಸಮಾಜವನ್ನು ತಿದ್ದುವ ಸಿನಿಮಾಗಳನ್ನು ಹೆಚ್ಚೆಚ್ಚು ತಯಾರಿಸಿದರೆ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಬ್ಸಿಡಿಗಾಗಿ ಸಿನಿಮಾ ಬೇಡ; ಉತ್ತಮ ಚಿತ್ರಗಳಿಗೆ ಬೆಂಬಲ

ಕನ್ನಡ ಚಿತ್ರೋದ್ಯಮದ ಪ್ರಗತಿ ಮತ್ತು ಬೆಳವಣಿಗೆಗೆ ನಮ್ಮ ಸರ್ಕಾರ ಸದಾ ಬೆಂಬಲ ನೀಡುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. “ಕೇವಲ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ. ಒಳ್ಳೆ ಸಿನಿಮಾ ಮಾಡಿ, ಜನ ಮೆಚ್ಚುವ, ಸಮಾಜದ ಮೇಲೆ ಉತ್ತಮ‌ ಪರಿಣಾಮ ಬೀರುವ ಸಿನಿಮಾ ಮಾಡಿದರೆ ಸಬ್ಸಿಡಿ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ,” ಎಂದ ಸಿಎಂ, ಸದ್ಯ ಬಾಕಿ ಇರುವ ಎಲ್ಲಾ ವರ್ಷದ ಸಬ್ಸಿಡಿಯನ್ನು ಒಟ್ಟಿಗೇ ನೀಡಲಾಗುವುದು ಎಂದು ಪ್ರಮುಖ ಪ್ರಕಟಣೆ ಮಾಡಿದರು.

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡುವ ಯೋಜನೆಯ ಕುರಿತು ಪ್ರಸ್ತಾಪಿಸಿದ ಅವರು, ಇದಕ್ಕಾಗಿ 160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. “ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ,” ಎಂದು ಘೋಷಿಸಿದರು.

ಪ್ರತಿ ವರ್ಷ ಪ್ರಶಸ್ತಿ ಪ್ರದಾನಕ್ಕೆ ಕ್ರಮ

ಹಿಂದಿನ ಸರ್ಕಾರಗಳು ಆಯಾ ವರ್ಷವೇ ಪ್ರಶಸ್ತಿಗಳನ್ನು ವಿತರಿಸದ ಕಾರಣಕ್ಕೆ 2018ನೇ ಸಾಲಿನಿಂದ ಪ್ರಶಸ್ತಿಗಳು ಬಾಕಿ ಉಳಿದಿವೆ. ಇದು ತಪ್ಪು, ಹೀಗಾಗಬಾರದು. ಆಯಾ ವರ್ಷದ ಸಿನಿಮಾಗಳಿಗೆ ಮರು ವರ್ಷವೇ ಪ್ರಶಸ್ತಿ ಕೊಟ್ಟರೆ ಮಾತ್ರ ಅರ್ಥಪೂರ್ಣ ಆಗಿರುತ್ತದೆ ಎಂದು ಸಿಎಂ ಹೇಳಿದರು.

“ನಮ್ಮ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ ಸಿನಿಮಾ ಪ್ರಶಸ್ತಿಗಳನ್ನು ನೀಡಲಿದೆ. ಇಂದು ಎರಡು ವರ್ಷದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಹಳೆ ಸರ್ಕಾರದ ಅವಧಿಯ ಇನ್ನೆರಡು ವರ್ಷದ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಸೂಚನೆ ನೀಡಿದ್ದೇನೆ. ಬಳಿಕ ಆಯಾ ವರ್ಷದ ಪ್ರಶಸ್ತಿಗಳನ್ನು ಮರು ವರ್ಷದ ಆರಂಭದಲ್ಲೇ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಇತ್ತೀಚೆಗೆ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಾಮಾಜಿಕ ಕಾಳಜಿ ಮತ್ತು ಗುಣಮಟ್ಟ ಕಡಿಮೆಯಾಗುತ್ತಿದೆ. “ಈಗ ಸಿಕ್ಕಾಪಟ್ಟೆ ಸಿನಿಮಾಗಳು ಬರುತ್ತಿವೆ. ಆದರೆ, ಸಾಮಾಜಿಕ ಕಾಳಜಿ ಮತ್ತು ಗುಣಮಟ್ಟ ಕಡಿಮೆ ಆಗುತ್ತಿದೆ. ಆದ್ದರಿಂದ ಈಗ ಸಿನಿಮಾ ನೋಡುವುದನ್ನೇ ಕಡಿಮೆ ಮಾಡಿದ್ದೇನೆ,” ಎಂದು ಮುಖ್ಯಮಂತ್ರಿಗಳು ತಮಾಷೆಯಾಗಿ ನುಡಿದರು.

Leave a Reply

Your email address will not be published. Required fields are marked *