ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹರ್ಷಿ ಶ್ರೀ ಅರವಿಂದರ ಕುರಿತು ಉಪನ್ಯಾಸ

Spread the love

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆಪ್ಟೆಂಬರ್ ೧೯, ಶುಕ್ರವಾರದಂದು ಸಂಜೆ ೬ ಗಂಟೆಗೆ ‘ಮಹರ್ಷಿ ಶ್ರೀ ಅರವಿಂದರ ತತ್ವದರ್ಶನ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ.

ಶ್ರೀ ಗುರಪ್ಪನವರು ಶ್ರೀಮತಿ ಗೌರಮ್ಮ ಬೆಲ್ಲದ ದತ್ತಿ ನಿಮಿತ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗೋವಾದ ಇಂಡೋ-ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಅವರು ಅತಿಥಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ವಹಿಸಲಿದ್ದಾರೆ.

ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗುರಪ್ಪ ಬೆಲ್ಲದ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು ಹಾಗೂ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ದತ್ತಿ ದಂಪತಿಗಳ ಸ್ಮರಣೆ
ಈ ದತ್ತಿಯನ್ನು ದಿವಂಗತ ಗುರಪ್ಪ ಬೆಲ್ಲದ ಮತ್ತು ಗೌರಮ್ಮ ಬೆಲ್ಲದ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಶರಣರಾದ ಚನಬಸಪ್ಪ ಮತ್ತು ಸಾದವ್ವ ದಂಪತಿಗಳಿಗೆ ೧೯೧೧ರಲ್ಲಿ ಜನಿಸಿದ ಗುರಪ್ಪ ಬೆಲ್ಲದ ಅವರು ಸ್ವಯಂ ಪರಿಶ್ರಮದಿಂದ ಮುಂಬೈನಲ್ಲಿ ಉದ್ಯಮದಲ್ಲಿ ಯಶಸ್ಸು ಗಳಿಸಿದರು. ನಂತರ ಧಾರವಾಡಕ್ಕೆ ಬಂದು ಪ್ರಿಂಟಿಂಗ್ ಪ್ರೆಸ್ ಮತ್ತು ರೇಶನ್ ಅಂಗಡಿಗಳಲ್ಲಿ ಕೆಲಸ ಮಾಡಿ, ೧೯೫೦ರಲ್ಲಿ ಮುನ್ಸಿಪಾಲ್ಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಗೌರಮ್ಮ ಅವರು ಕೂಡ ಅವರಿಗೆ ಸದಾ ಬೆಂಬಲ ನೀಡಿದ್ದರು.
ಅವರ ಪುತ್ರರಾದ ಚಂದ್ರಕಾಂತ ಬೆಲ್ಲದ ಮತ್ತು ಶಿವಪುತ್ರ ಬೆಲ್ಲದ ಅವರು ತಂದೆಯ ವ್ಯಾಪಾರವನ್ನು ಮುಂದುವರಿಸಿ, ಕೃಷಿ ಯಂತ್ರೋಪಕರಣಗಳು ಹಾಗೂ ಬೀಜ-ಗೊಬ್ಬರಗಳ ವ್ಯವಹಾರದಲ್ಲಿ ರಾಜ್ಯದಲ್ಲೇ ಅಗ್ರಗಣ್ಯರಾಗಿ ಬೆಳೆದಿದ್ದಾರೆ.

ತಮ್ಮ ತಂದೆ-ತಾಯಿಯಾದ ಗುರಪ್ಪ ಬೆಲ್ಲದ (೩೦-೧೧-೧೯೮೯) ಮತ್ತು ಗೌರಮ್ಮ ಬೆಲ್ಲದ (೧೯-೯-೧೯೬೭) ಅವರ ಸ್ಮರಣಾರ್ಥವಾಗಿ, ಮಕ್ಕಳು ಹಾಗೂ ಮೊಮ್ಮಕ್ಕಳಾದ ಮಹೇಶ, ಅರವಿಂದ, ಪ್ರಶಾಂತ ಬೆಲ್ಲದ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ ೧೯ ರಂದು ಆದರ್ಶ ದಂಪತಿಗಳ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರ ಆದರ್ಶಗಳನ್ನು ನೆನಪಿಸಿಕೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *