
ಲಕ್ಷ್ಮೇಶ್ವರ (ಅ. 30): ಕನ್ನಡದ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಪಟ್ಟಣದಲ್ಲಿ ಇಂದು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಲಕ್ಷ್ಮೇಶ್ವರದ ಹೊಸ ಬಸ್ ಸ್ಟ್ಯಾಂಡ್ ಗೇಟಿನ ಎದುರು ಜೈ ಭೀಮ ಆಟೋ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ವಿಶೇಷ ಪೂಜೆ ಹಾಗೂ ನಮನ ಸಲ್ಲಿಸಲಾಯಿತು.
ಕನ್ನಡ ಭಾಷೆಗಾಗಿ ಅಹೋರಾತ್ರಿ ದುಡಿದ ಏಕೈಕ ನಟ
ಈ ಸಂದರ್ಭದಲ್ಲಿ ಮಾತನಾಡಿದ ಆಟೋ ಸಂಘದ ಅಧ್ಯಕ್ಷ ಬಸವರಾಜ ನಡವಿನಕೇರಿ ಅವರು, “ಕನ್ನಡದ ನುಡಿ, ಭಾಷೆಗಾಗಿ ಅದರ ಉಳಿವು, ಅರಿವು ಮತ್ತು ರಕ್ಷಣೆಗಾಗಿ ನಾಡಿನಲ್ಲಿ ಕನ್ನಡ ಭಾಷೆ ಉಳಿಯಲು ಅಹೋರಾತ್ರಿ ಕನ್ನಡ ಚಲನಚಿತ್ರಗಳನ್ನು ತೆಗೆದು, ರಾಜ್ಯದ ಕನ್ನಡ ಕಂದಗಳಿಗೆ ಹಾಗೂ ಅಭಿಮಾನಿಗಳಿಗೆ ಬೆಳಕು ನೀಡಿದಂತಹ ಏಕೈಕ ನಟ ಡಾ. ಪುನೀತ್ ರಾಜ್‌ಕುಮಾರ್” ಎಂದು ಸ್ಮರಿಸಿದರು.
ಇದೇ ವೇಳೆ ಮಾತನಾಡಿದ ಗ್ರಾ.ಪಂ. ಸದಸ್ಯ ಹರೀಶ್ ಲಕ್ಷ್ಮೇಶ್ವರ ಹಾಗೂ ನೀಲಪ್ಪ ಶೆರಸೂರಿ ಅವರು, ಕರ್ನಾಟಕದ ಚಿತ್ರರಂಗದ ಈ ಮಹಾನಾಯಕ, ನಾಡಿನ ಜಲ, ನೆಲ, ಕನ್ನಡ ನುಡಿ ಭಾಷೆಗಾಗಿ ಸಾಮಾಜಿಕವಾಗಿ ಹೋರಾಟ ಮಾಡಿದವರು. ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯನ್ನು ನಡೆಸಿ, ಅವರ ಸವಿನೆನಪಿಗಾಗಿ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಅವರು ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಗಣ್ಯರ ಹಾಗೂ ಅಭಿಮಾನಿಗಳ ಭಾಗಿ
ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾಂತೇಶ್ ಹಾದಿಮನಿ, ಕಿರಣ ಗುರುಕುಲಮನಿ, ಪ್ರತಾಪ ಹಂಚಿನಮನಿ, ಮಂಜುನಾಥ ಹುರಕನವರ, ಪ್ರದೀಪ ಮೇಲಿನಮನಿ, ದುಡೇಶ್ ಗೌರಿ, ಮಲ್ಲೇಶಪ್ಪ ವಡ್ಡರ, ತಿಮ್ಮಣ್ಣ ಸಿದ್ದಣ್ಣವರ, ರಮೇಶ ಹಾವೇರಿ, ಮಂಜು ಅಕ್ಕಿ, ಪ್ರವೀಣ ಮೇಲಿನಮನಿ, ಶಿವರಾಜ್ ಯತ್ನಳ್ಳಿ, ಅಪ್ಪು ಹಾದಿಮನಿ, ಮಲ್ಲೇಶ ಜಬಡಿ ಸೇರಿದಂತೆ ಜೈ ಭೀಮ ಆಟೋ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಅಪಾರ ಅಭಿಮಾನಿಗಳು ಪಾಲ್ಗೊಂಡು ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

