ಬಮ್ಮಸಮುದ್ರದಲ್ಲಿ “ಕ್ಷೀರ ಸಂಜೀವಿನಿ” ಯೋಜನೆಗೆ ಚಾಲನೆ ಶಾಸಕ ಎಂ.ಆರ್. ಪಾಟೀಲ ಅವರಿಂದ ಹೈನುಗಾರಿಕೆಗೆ ಉತ್ತೇಜನ; ಎತ್ತಿನಗಾಡಿಯಲ್ಲಿ ಆಗಮಿಸಿ ಗಮನ ಸೆಳೆದ ಶಾಸಕರು

Spread the love

ಹುಬ್ಬಳ್ಳಿ: ತಾಲ್ಲೂಕಿನ ಬಮ್ಮಸಮ್ಮುದ್ರ ಗ್ರಾಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್), ಧಾರವಾಡ, ಗದಗ, ಉತ್ತರಕನ್ನಡ ಜಿಲ್ಲಾ ಹಾಲು ಒಕ್ಕೂಟ ಹಾಗೂ ಬಮ್ಮಸಮುದ್ರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಹಯೋಗದಲ್ಲಿ “ಕ್ಷೀರ ಸಂಜೀವಿನಿ ಹಂತ-5” ಅರಿವು ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಶಾಸಕ ಎಂ.ಆರ್. ಪಾಟೀಲ ಅವರು ಗ್ರಾಮಸ್ಥರ ಪ್ರೀತಿಯ ಸ್ವಾಗತದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹಾಲು ಸಂಗ್ರಹಣೆಯಲ್ಲಿ ಗಣನೀಯ ಸಾಧನೆ
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಬಮ್ಮಸಮುದ್ರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಆರಂಭದಲ್ಲಿ ದಿನಕ್ಕೆ 60 ಲೀಟರ್ ಹಾಲು ಸಂಗ್ರಹಿಸುತ್ತಿತ್ತು. ಆದರೆ ಈಗ ಅದು ದಿನಕ್ಕೆ 600 ಲೀಟರ್‌ಗಳವರೆಗೆ ಹೆಚ್ಚಿರುವುದು ಹೆಮ್ಮೆಯ ಸಂಗತಿ. ಇದು ರೈತರ ಪರಿಶ್ರಮ, ಹಿರಿಯರ ಬೆಂಬಲ, ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.

ಸಂಘಕ್ಕೆ ಎತ್ತಿನಗಾಡಿ ಮೂಲಕ ಆಗಮನ
ಶಾಸಕ ಎಂ.ಆರ್. ಪಾಟೀಲ ಅವರು ಎತ್ತಿನಗಾಡಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಗ್ರಾಮಸ್ಥರು ಹೂಮಳೆ ಸುರಿಸಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಕಾರ್ಯಕ್ರಮವು ಶ್ರೀ ಶ್ರೀ ಗುರು ಶಾಂತಪ್ಪಜ್ಜನವರು ಹಿರೇಮಠ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಸುರೇಶ ಬನ್ವಿ, ಕೆ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ್, ವ್ಯವಸ್ಥಾಪಕ ರಾಕೇಶ್ ತಳ್ಳೂರ, ಆರೋಗ್ಯ ಅಧಿಕಾರಿ ಡಾ. ಎಸ್.ಬಿ. ಪೂಜಾರ್, ವೈದ್ಯಾಧಿಕಾರಿ ಡಾ. ಸರ್ವೇಶ್ ಪಾಟೀಲ್, ವಕೀಲ ವಾ.ಯು. ಯಲಿವಾಳ, ಮಂಡಲ ಅಧ್ಯಕ್ಷ ಷಣ್ಮುಖ ಐಹೊಳೆ, ಮುಖಂಡರಾದ ರವಿಗೌಡ ಪಾಟೀಲ್, ಸಹದೇವ ಮಾಳಗಿ, ಮಹೇಶ್ ಮನಕವಾಡ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳೆಯರು ಹಾಗೂ ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *