
ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಲಾಠಿ ಪ್ರಹಾರ ಘಟನೆಗೆ ಸಂಬಂಧಿಸಿದಂತೆ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಸಮಯದಲ್ಲಿ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನರೇಂದ್ರ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಗ್ರಾಮದ ಹಿರಿಯರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ಅಲ್ಲಿ ಹಾಜರಿದ್ದ ಸಾಮಾನ್ಯ ಉಡುಪಿನಲ್ಲಿದ್ದ (ಬೀನ್ ಡ್ರೆಸ್) ಓರ್ವ ಪೊಲೀಸ್ ಸಿಬ್ಬಂದಿ ಜೋಶಿ ಅವರ ಮಾತುಗಳನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಇದನ್ನು ಗಮನಿಸಿದ ಜೋಶಿ ತೀವ್ರ ರೋಷಾವೇಷಗೊಂಡರು. “ನೀನ್ಯಾರು? ಯಾಕೆ ರೆಕಾರ್ಡ್ ಮಾಡುತ್ತಿದ್ದೀಯಾ? ನಿನ್ನ ಮೈಯಲ್ಲಿ ಸೊಕ್ಕಾ?” ಎಂದು ಗುಡುಗಿದ ಅವರು, “ಆ ಕಮತಗಿ ಹಾಗೂ ನಿನ್ನನ್ನು ಸೇರಿಸಿ ಕೋರ್ಟ್‌ಗೆ ಎಳೆಯುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಸಿಪಿಐ ಹಾಗೂ ಬೀಟ್ ಪೊಲೀಸ್ ಅಮಾನತಿಗೆ ಆಗ್ರಹ
ಘಟನೆಯ ತೀವ್ರತೆಯಿಂದ ಸಿಟ್ಟಿಗೆದ್ದ ಜೋಶಿ, ತಕ್ಷಣವೇ ಆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದರು. “ಯಾರ ಮಾತು ಕೇಳಿ ಆತ ವಿಡಿಯೋ ಮಾಡುತ್ತಿದ್ದಾನೆ? ನಡೀರಿ ಎಸ್‌ಪಿ ಕಚೇರಿಗೆ, ಮುಂದೆ ಧರಣಿ ಮಾಡೋಣ” ಎಂದು ಹೇಳುತ್ತಾ ಮೈಕ್ ಕೆಳಗಿಟ್ಟು ಹೊರನಡೆಯಲು ಮುಂದಾದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ, ಲಾಠಿ ಪ್ರಹಾರಕ್ಕೆ ಸಿಪಿಐ ಕಮತಗಿಯೇ ನೇರ ಕಾರಣ ಎಂದು ಆರೋಪಿಸಿದರು. “ನರೇಂದ್ರದಲ್ಲಿ ಎರಡು ಡಿಜೆಗಳನ್ನು ಹಚ್ಚಿದ್ದರು. ಪೊಲೀಸರೇ ಹುಚ್ಚುತನದಿಂದ ಲಾಠಿ ಪ್ರಹಾರ ಮಾಡಿದ್ದಾರೆ. ಕೆಲವು ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಇಲ್ಲಿನ ಎಸ್.ಪಿ. ದಕ್ಷ ಅಧಿಕಾರಿಯಾಗಿದ್ದಾರೆ. ಆದರೆ, ಲಾಠಿ ಚಾರ್ಜ್‌ಗೆ ಕಾರಣರಾದ ಸಿಪಿಐ ಕಮತಗಿ ಮತ್ತು ಬೀಟ್ ಪೊಲೀಸ್ ಸೈಯದ್ ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
ಸಚಿವರ ರೋಷಾವೇಷದ ನಂತರ ನರೇಂದ್ರ ಗ್ರಾಮದಲ್ಲಿ ಮತ್ತಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆಯ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.

