
ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಶ್ರೀ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ‘ನವಯುಗ ಸಂಘಟನೆ’ಯು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಪ್ರತಿ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಲಕ್ಷಾಂತರ ಜನ ಸೇರುವ ಈ ಪುಣ್ಯಕ್ಷೇತ್ರದಲ್ಲಿ ವ್ಯವಸ್ಥೆಗಳು ಸಂಪೂರ್ಣ ಹದಗೆಟ್ಟಿವೆ ಎಂದು ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದೆ.
ಜೋಗುಳ ಭಾವಿ ಹಾಗೂ ಸತ್ಯವ್ವಾ ದೇವಸ್ಥಾನದ ಬಳಿ ಮಹಿಳಾ ಭಕ್ತರಿಗೆ ಶೌಚಾಲಯ ಮತ್ತು ಬಟ್ಟೆ ಬದಲಿಸುವ ಕೊಠಡಿಗಳಿಲ್ಲದೆ ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ವಾಹನ ಜಕಾತಿ ವಸೂಲಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಇದರಿಂದಾಗಿ ಭಕ್ತರು ಗಂಟೆಗಟ್ಟಲೆ ವಾಹನದ ಸಾಲಿನಲ್ಲಿ ನಿಲ್ಲುವಂತಾಗಿದೆ. ದೇವಸ್ಥಾನದ ಪವಿತ್ರ ವಿಧಿವಿಧಾನವಾದ ಪಡ್ಲಿಗೆ ತುಂಬಿಸಲು ಭಕ್ತರಿಗೆ ಸರಿಯಾದ ಮಾಹಿತಿ ಅಥವಾ ನಿಗದಿತ ಸ್ಥಳದ ವ್ಯವಸ್ಥೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರೊಂದಿಗೆ ಕುಡಿಯುವ ನೀರಿನ ಅಭಾವವು ಭಕ್ತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಂಘಟನೆಯ ಪದಾಧಿಕಾರಿಗಳು ದೂರಿದ್ದಾರೆ.
ಕ್ಷೇತ್ರದ ಎಣ್ಣೆಕೊಳ್ಳದಲ್ಲಿ ಭಕ್ತರಿಗೆ ಸ್ನಾನ ಮಾಡಲು ಹಾಗೂ ಬಟ್ಟೆ ಬದಲಿಸಲು ಸರಿಯಾದ ವ್ಯವಸ್ಥೆಯಿಲ್ಲ. ಅಲ್ಲಿ ನಿರ್ಮಿಸಲಾದ ಕಲ್ಯಾಣ ಮಂಟಪ ಹಾಗೂ ಶೌಚಾಲಯಗಳಿಗೆ ಬೀಗ ಹಾಕಿರುವುದರಿಂದ ಭಕ್ತರು ಪರದಾಡುವಂತಾಗಿದೆ. ಸರ್ಕಾರದ ಸಿಬ್ಬಂದಿಗಳು ಭಕ್ತರಿಗೆ ನೆರವಾಗುವ ಬದಲು ಹಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಹಾಗೂ ವಿಐಪಿ ದರ್ಶನದ ಹೆಸರಿನಲ್ಲಿ ಸಾಮಾನ್ಯ ಭಕ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮನವಿಯಲ್ಲಿ ಮಾಡಲಾಗಿದೆ. ಕ್ಷೇತ್ರದ ಭದ್ರತೆ ಹಾಗೂ ಮಾಹಿತಿ ಒದಗಿಸಲು ಕನಿಷ್ಠ 200 ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಬೇಕು ಮತ್ತು ಹುಂಡಿ ಹಣದ ದುರ್ಬಳಕೆ ತಡೆದು ಭಕ್ತರಿಗೆ ಪಾರದರ್ಶಕ ಸೇವೆ ಒದಗಿಸಬೇಕೆಂದು ಆಗ್ರಹಿಸಿರುವ ಸಂಘಟನೆಯು, ಈ ಕುರಿತು ಸಂಸದ ಜಗದೀಶ ಶೆಟ್ಟರ್ ಹಾಗೂ ಸವದತ್ತಿ ತಹಶೀಲ್ದಾರರಿಗೂ ಪ್ರತಿಗಳನ್ನು ಸಲ್ಲಿಸಿದೆ.

