ಕುಶಾಲನಗರ: ಡಿಜೆ ಸೌಂಡ್ ಬಳಕೆ, 5 ವಾಹನ ವಶ, ಪ್ರಕರಣ ದಾಖಲು

Spread the love

ಮಡಿಕೇರಿ: ಕುಶಾಲನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಿಯಮ ಮೀರಿ ಅತಿಯಾದ ಶಬ್ದ ಹೊರಹೊಮ್ಮಿಸುವ ಡಿಜೆ ಸೌಂಡ್ ಸಿಸ್ಟಂ ಬಳಸಿದ ಹಿನ್ನೆಲೆಯಲ್ಲಿ ಪೊಲೀಸರು ಐದು ವಾಹನಗಳನ್ನು ವಶಪಡಿಸಿಕೊಂಡು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 31 ರಂದು ಕುಶಾಲನಗರದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ ನಿಗದಿಪಡಿಸಿದ್ದ ಶಬ್ದದ ಮಿತಿಯನ್ನು ಉಲ್ಲಂಘಿಸಲಾಗಿದೆ.

ಮೆರವಣಿಗೆಯಲ್ಲಿ ಅಳವಡಿಸಿದ್ದ ಪ್ರೆಶರ್ ಮಿಡ್ ಸ್ಪೀಕರ್ ನಿಂದ ಅತಿಯಾದ ಶಬ್ದ ಹೊರಹೊಮ್ಮಿಸುತ್ತಿದ್ದು, ಇದು ನಿಯಮಬಾಹಿರ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಈ ಸಂಬಂಧ ಪ್ರೆಶರ್ ಮಿಡ್ ಸ್ಪೀಕರ್ ಅಳವಡಿಸಿದ್ದ ಐದು ವಾಹನಗಳ ಚಾಲಕರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸರು ಈ ಹಿಂದೆ ಮೆರವಣಿಗೆಯಲ್ಲಿ ಅತಿಯಾದ ಶಬ್ದ ಹೊರಹೊಮ್ಮಿಸುವ ಪ್ರೆಶರ್ ಮಿಡ್ ಸ್ಪೀಕರ್‌ಗಳನ್ನು ಬಳಸದಂತೆ ಸೂಚನೆ ನೀಡಿದ್ದರು. ಆದರೂ, ನಿಯಮಗಳನ್ನು ಉಲ್ಲಂಘಿಸಿ ಇದನ್ನು ಬಳಸಲಾಗಿದೆ ಎಂದು ಎಸ್.ಪಿ. ಮಾಹಿತಿ ನೀಡಿದರು. ಈ ಕ್ರಮವು ಧ್ವನಿ ಮಾಲಿನ್ಯ ತಡೆಗೆ ಪೊಲೀಸರ ಕಟ್ಟುನಿಟ್ಟಿನ ನಿಲುವು ಎತ್ತಿ ಹಿಡಿದಿದೆ.

Leave a Reply

Your email address will not be published. Required fields are marked *