ಕುಂದಗೋಳ: ಅಂಚೆ ಕಚೇರಿಯಲ್ಲಿ ಗ್ರಾಹಕರು ಮರೆತ 50 ಸಾವಿರ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಪೋಸ್ಟ್ ಮಾಸ್ಟರ್

Spread the love

ಕುಂದಗೋಳ: ಇಂದಿನ ಕಾಲದಲ್ಲಿ ಹಣದ ವ್ಯಾಮೋಹಕ್ಕೆ ಬಿದ್ದು ಮನುಷ್ಯತ್ವ ಮರೆಯುವವರ ನಡುವೆ, ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ಗ್ರಾಹಕರು ಮರೆತು ಹೋದ ಬರೋಬ್ಬರಿ 50 ಸಾವಿರ ರೂಪಾಯಿ ನಗದು ಹಣವನ್ನು ಸುರಕ್ಷಿತವಾಗಿ ಮರಳಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ. ಪಟ್ಟಣದ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಶ್ ರಾಮನಕೊಪ್ಪ ಅವರ ಈ ಕರ್ತವ್ಯ ಪ್ರಜ್ಞೆ ಈಗ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

​ಕಳೆದ ಮಾರ್ಚ್ 10 ರಂದು ಗ್ರಾಹಕರೊಬ್ಬರು ಅಂಚೆ ಕಚೇರಿಗೆ ಒಟ್ಟು 3 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಬಂದಿದ್ದರು. ಆದರೆ ಅವಸರದಲ್ಲಿ ತಮ್ಮ ಬಳಿ ಕೇವಲ 2.50 ಲಕ್ಷ ರೂಪಾಯಿ ಇದೆ ಎಂದು ಭಾವಿಸಿ, ಅಷ್ಟೇ ಮೊತ್ತವನ್ನು ಖಾತೆಗೆ ಜಮಾ ಮಾಡಿ ಉಳಿದ 50 ಸಾವಿರ ರೂಪಾಯಿಗಳನ್ನು ಕಚೇರಿಯಲ್ಲೇ ಬಿಟ್ಟು ಮನೆಗೆ ತೆರಳಿದ್ದರು. ಅಂದು ರಾತ್ರಿ ಮನೆಯಲ್ಲಿ ಹಣದ ಲೆಕ್ಕ ಪರಿಶೋಧಿಸಿದಾಗ 50 ಸಾವಿರ ರೂಪಾಯಿ ಕಡಿಮೆ ಇರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಪೋಸ್ಟ್ ಮಾಸ್ಟರ್ ಮಹೇಶ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, “ನಿಮ್ಮ ಹಣ ಸುರಕ್ಷಿತವಾಗಿದೆ, ನಾಳೆ ಬಂದು ಕಚೇರಿಯಲ್ಲಿ ಪಡೆದುಕೊಳ್ಳಿ” ಎಂಬ ಭರವಸೆಯ ಮಾತು ಸಿಕ್ಕಿದೆ. ನುಡಿದಂತೆ ಮರುದಿನ ಗ್ರಾಹಕರಿಗೆ ಹಣ ಹಸ್ತಾಂತರಿಸುವ ಮೂಲಕ ಮಹೇಶ್ ಅವರು ನಂಬಿಕೆಗೆ ಮತ್ತೊಂದು ಹೆಸರಾಗಿದ್ದಾರೆ.

​ಪೋಸ್ಟ್ ಮಾಸ್ಟರ್ ಮಹೇಶ್ ರಾಮನಕೊಪ್ಪ ಅವರ ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ್ ಕೊಬ್ಬಯ್ಯನವರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ತಾಲೂಕು ಅಧ್ಯಕ್ಷ ಕೋಟೆಪ್ಪ ತಳಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ದೊಡ್ಡಮನಿ ಹಾಗೂ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ ತಳಗೇರಿ ಅವರು ಅಂಚೆ ಕಚೇರಿಗೆ ಭೇಟಿ ನೀಡಿ, ಮಹೇಶ್ ಅವರಿಗೆ ಸಿಹಿ ತಿನ್ನಿಸಿ ಗೌರವಿಸಿ ಸನ್ಮಾನಿಸಿದರು. ಇಲಾಖೆಯ ಘನತೆ ಹೆಚ್ಚಿಸಿದ ಅಧಿಕಾರಿಯ ಕಾರ್ಯವೈಖರಿಗೆ ಪಟ್ಟಣದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *