ಸಾದರ ಸಮಾಜದವರಿಗೆ ಮೊದಲಿನಂತೆ 02 ಎ ಮಿಸಲಾತಿ ಪ್ರಮಾಣ‌ ಪತ್ರ ನೀಡಲು ಸಮಾಜದ ಮುಂಖಡರಿಂದ ತಹಶಿಲ್ದಾರ ‌ರಾಜು ಮಾವರಕರವರಿಗೆ ಒತ್ತಾಯ

Spread the love

ಕುಂದಗೋಳ: ಹಿಂದೂ ಸಾದರ್ ಸಮಾಜದ ವಿದ್ಯಾರ್ಥಿಗಳಿಗೆ ‘2ಎ’ ಜಾತಿ ಪ್ರಮಾಣಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಸಮಾಜದ ಮುಖಂಡರು ಪಟ್ಟಣದ ತಹಶೀಲ್ದಾರ್ ರಾಜು ಮಾವರಕರ್ ಅವರಿಗೆ ಪ್ರಮಾಣಪತ್ರಗಳನ್ನು ಮೊದಲಿನಂತೆ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕು ಮುನ್ನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹಿಂದೂ ಸಾದರ್ ಸಮಾಜದ ಸಭೆ ನಡೆಸಿದರು ಸಭೆಯಲ್ಲಿ ಸಮಾಜದ ಹಿರಿಯ ಮುಖಂಡ ಡಿ.ಜೆ. ಪಾಟೀಲ ಅವರು ಮಾತನಾಡಿ, “ಸಮಾಜದಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದ್ದು, ಇದರಿಂದ ಶಿಕ್ಷಣ, ಉದ್ಯೋಗ, ಮತ್ತು ರಾಜಕೀಯದಲ್ಲಿ ಪ್ರಗತಿ ಕುಂಠಿತವಾಗುತ್ತಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ,” ಎಂದು ಕರೆ ನೀಡಿದರು. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಸುಲಭವಾಗಿ ಪಡೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ನಂತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ರಾಜು ಮಾವರಕರ್ ಅವರನ್ನು ಭೇಟಿಯಾದರು. ಈ ವೇಳೆ, ಸಮಾಜದ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ‘2ಎ’ ಪ್ರಮಾಣಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಯಾವುದೇ ಸಮಸ್ಯೆ ಇಲ್ಲದೆ ಪ್ರಮಾಣಪತ್ರ ನೀಡಲಾಗುತ್ತಿತ್ತು, ಆದರೆ ಈಗ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆಪಾದಿಸಿದರು.
ಮೊದಲಿನಂತೆ ಪ್ರಮಾಣಪತ್ರಗಳನ್ನು ವಿತರಿಸಲು ತಹಶೀಲ್ದಾರ್ ಅವರಿಗೆ ಮುಖಂಡರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಾಜು ಮಾವರಕರ್, “ಸರ್ಕಾರದ ನಿಯಮಾವಳಿಗಳ ಪ್ರಕಾರ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡಲಾಗುವುದು,” ಎಂದು ಸ್ಪಷ್ಟಪಡಿಸಿದರು. ಹಿಂದಿನ ಸಮಸ್ಯೆಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಇಂತಹ ತೊಂದರೆಗಳು ಆಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹನಮಂತಗೌಡ್ರ ಪಾಟೀಲ, ಎಸ್.ಎಫ್. ಬೆಂಗೇರಿ, ದಾನಪ್ಪ ಗಂಗಾಯಿ, ಎನ್.ಎನ್. ಪಾಟೀಲ, ವೆಂಕನಗೌಡ ಪಾಟೀಲ, ಈಶ್ವರಪ್ಪ ಗಂಗಾಯಿ, ಬಸವರಾಜ ಕೊಪ್ಪದ, ಮಲ್ಲಿಕಾರ್ಜುನ ಕಿರೇಸೂರ, ಮಲ್ಲಿಕಾರ್ಜುನ ಪಾಟೀಲ, ತೋಟಪ್ಪಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ ಹಾಗೂ ವಕೀಲರಾದ ಯು.ಎಂ. ಪಾಟೀಲ, ಐ.ಬಿ. ಬೆಟದೂರ, ಪ್ರಕಾಶ ಸೊರಟಿ, ಯೂ.ಸಿ. ಪಾಟೀಲ, ರಾಜುಗೌಡ ಪಾಟೀಲ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *