ಕುಂದಗೋಳ:ಬೆಳೆಸಾಲ ವಸೂಲಿಗೆ ಕಿರುಕುಳ: ಕರ್ನಾಟಕ ಬ್ಯಾಂಕ್ ಎದುರು ರೈತರ ಆಕ್ರೋಶದ ಪ್ರತಿಭಟನೆ!

Spread the love

ಕುಂದಗೋಳ: ರೈತರಿಗೆ ನೀಡಿರುವ ಬೆಳೆಸಾಲದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿ, ಬಡ್ಡಿ ಸಮೇತ ಅಸಲು ತುಂಬಲು ಕೋರ್ಟ್‌ ಮೂಲಕ ನೋಟಿಸ್ ನೀಡಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಆಪಾದಿಸಿ, ರತ್ನಭಾರತ ರೈತ ಸಮಾಜ ಸಂಘಟನೆಯ ನೇತೃತ್ವದಲ್ಲಿ ರೈತರು ಇಲ್ಲಿನ ಕರ್ನಾಟಕ ಬ್ಯಾಂಕಿನ ಎದುರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಾಲದ ಮೊತ್ತ 3 ಪಟ್ಟು ಏರಿಕೆ, ಕೋರ್ಟ್‌ ನೋಟಿಸ್!
ಬೆಳಿಗ್ಗೆ ಗಾಳಿಮರೆಮ್ಮ ದೇವಸ್ಥಾನದಿಂದ ಆಗಮಿಸಿದ ರೈತರು, ಕರ್ನಾಟಕ ಬ್ಯಾಂಕ್‌ನ ರೈತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ರೈತ ಶಂಕ್ರಪ್ಪ ಕುಂದಗೋಳ ಅವರು ಬ್ಯಾಂಕಿನಲ್ಲಿ ಬೆಳೆಸಾಲವಾಗಿ ಪಡೆದ ₹ 3 ಲಕ್ಷ ಸಾಲವನ್ನು ಕೇವಲ ಎರಡು ವರ್ಷಗಳಲ್ಲಿ ಬಡ್ಡಿ ಸಮೇತ ₹ 6 ಲಕ್ಷಕ್ಕೆ ಏರಿಸಲಾಗಿದೆ. ಇದಲ್ಲದೇ, ಅವರ ಅಂಗವಿಕಲ ಸಹೋದರ ಹಾಗೂ ಮೃತ ತಂದೆಯ ಖಾತೆಗಳನ್ನು ವಿಭಜಿಸಿ, ಒಟ್ಟಾರೆಯಾಗಿ ₹ 9 ಲಕ್ಷ ಸಾಲ ತುಂಬುವಂತೆ ನ್ಯಾಯಾಲಯದ ಮೂಲಕ ನೋಟಿಸ್ ಜಾರಿಗೊಳಿಸಿರುವುದಕ್ಕೆ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಕ್ರಮದಿಂದಾಗಿ ರೈತರು ನ್ಯಾಯಾಲಯಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಓಟಿಎಸ್ ಸೌಲಭ್ಯ ನಿರಾಕರಣೆ ಆರೋಪ
ಇದೇ ವೇಳೆ, ರೈತರು ಕರ್ನಾಟಕ ಬ್ಯಾಂಕ್ ವಿರುದ್ಧ ಓಟಿಎಸ್‌ (ಒಂದು ಬಾರಿ ಇತ್ಯರ್ಥ) ಸೌಲಭ್ಯ ನಿರಾಕರಿಸುತ್ತಿರುವ ಗಂಭೀರ ಆರೋಪವನ್ನು ಮಾಡಿದರು. ಉಳಿದ ಎಲ್ಲ ಬ್ಯಾಂಕುಗಳು ರೈತರ ಸಾಲದಲ್ಲಿ ಕಡಿತ ಮಾಡಿ ಓಟಿಎಸ್‌ ಮೂಲಕ ಭರಣಾ ಮಾಡಿಕೊಂಡಿವೆ. ಆದರೆ, ಈ ಬ್ಯಾಂಕ್ ಮಾತ್ರ ರೈತರಿಗೆ ಅನ್ಯಾಯವೆಸಗುತ್ತಿದೆ. ರೈತರು ತಾವು ಪಡೆದ ಅಸಲು ₹ 3 ಲಕ್ಷಕ್ಕೆ ಹೆಚ್ಚುವರಿಯಾಗಿ ₹ 1.5 ಲಕ್ಷ ಸೇರಿಸಿ, ಒಟ್ಟು ₹ 4.5 ಲಕ್ಷ ಭರಣ ಮಾಡಲು ಮನವಿ ಮಾಡಿದರೂ, ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕರು ಸಂಪೂರ್ಣ ಅಸಡ್ಡೆ ತೋರುತ್ತಿದ್ದಾರೆ ಎಂದು ರತ್ನಭಾರತ ರೈತ ಸಮಾಜದ ನವದೆಹಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಬಸನಗೌಡ ಪಾಟೀಲ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಈ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಕೂಡಲೇ ಮನವಿ ಅರ್ಪಿಸಿ, ರೈತರಿಗೆ ನ್ಯಾಯ ಒದಗಿಸಲು ವಿನಂತಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.

ಬ್ಯಾಂಕ್‌ ಬಂದ್‌ ಎಚ್ಚರಿಕೆ
ಬ್ಯಾಂಕಿನ ಈ ದಮನಕಾರಿ ನೀತಿಯನ್ನು ಖಂಡಿಸಿದ ಪ್ರತಿಭಟನಾನಿರತ ರೈತರು, ಅಕ್ಟೋಬರ್ 10ರೊಳಗೆ ರೈತನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ, ಬ್ಯಾಂಕ್‌ ಬಂದ್‌ ಮಾಡಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತರಾದ ಮಂಜಪ್ಪ ಯಲಿಗಾರ, ಶಿವಾನಂದ ಕಟಗಿ, ವಿರೂಪಾಕ್ಷ ಗಣಿ, ಸಕ್ರು ಕಮ್ಮಾರ, ಶಂಕ್ರಪ್ಪ ಕುಂದಗೋಳ, ಬಸವರಾಜ ಅಣ್ಣೀಗೇರಿ, ರುದ್ರಪ್ಪ ಬೆಂಗೇರಿ, ಹನಮಂತಗಭಡ ಕರೆಪ್ಪಗೌಡ್ರ, ಜಯಪ್ಪ ಕಮಡೊಳ್ಳಿ, ರಾಜು ಮಲ್ಲಿಗವಾಡ, ಮುತ್ತು ಯೋಗಪ್ಪನವರ, ಸುರೇಶ ಕಮಡೊಳ್ಳಿ ಸಹಿತ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *