
ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಇದ್ದ ಅಕ್ರಮ ಗುಡಿಸಲುಗಳ ತೆರವು ಕಾರ್ಯಾಚರಣೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ತೆರವುಗೊಂಡ ಕುಟುಂಬಗಳಿಗೆ ಮಾನವೀಯತೆ ದೃಷ್ಟಿಯಿಂದ ಪರ್ಯಾಯ ವಸತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ವಾಸಕ್ಕೆ ಯೋಗ್ಯವಲ್ಲದ ಜಾಗ
ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಅನೇಕರು ಅತಿಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ ಆ ಪ್ರದೇಶವು ಜನವಸತಿಗೆ ಯಾವುದೇ ರೀತಿಯಲ್ಲೂ ಯೋಗ್ಯವಾಗಿರಲಿಲ್ಲ. ಅಲ್ಲಿನ ನಿವಾಸಿಗಳಿಗೆ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಹಲವು ಬಾರಿ ನೋಟಿಸ್ ನೀಡಲಾಗಿದ್ದರೂ, ಅವರು ಅದಕ್ಕೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ತಾತ್ಕಾಲಿಕ ಆಶ್ರಯಕ್ಕೆ ಸೂಚನೆ
ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೀಡಾದ ಕುಟುಂಬಗಳ ಬಗ್ಗೆ ಮಾತನಾಡಿದ ಸಿಎಂ, “ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅಲ್ಲಿ ವಾಸವಿದ್ದವರಿಗೆ ತಾತ್ಕಾಲಿಕ ಆಶ್ರಯ, ಊಟ ಹಾಗೂ ಇನ್ನಿತರ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಲ್ಲಿ ವಾಸವಿದ್ದವರಲ್ಲಿ ಬಹುತೇಕರು ಹೊರರಾಜ್ಯದ ವಲಸೆ ಕಾರ್ಮಿಕರಾಗಿದ್ದಾರೆ. ಆದರೂ ಕೂಡ ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು,” ಎಂದರು.
ಪಿಣರಾಯಿ ವಿಜಯನ್ ಟೀಕೆಗೆ ತಿರುಗೇಟು
ಇದೇ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಟೀಕೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, “ಬುಲ್ಡೋಜರ್ ನ್ಯಾಯಕ್ಕೂ ಮತ್ತು ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ,” ಎಂದು ತಿರುಗೇಟು ನೀಡಿದರು.
ಕಾನೂನುಬದ್ಧವಾಗಿ ಒತ್ತುವರಿ ತೆರವು ಮಾಡಲಾಗಿದೆಯೇ ಹೊರತು, ಇದು ದ್ವೇಷದ ರಾಜಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

