

ಪೋಟೋ: ತಾಲ್ಲೂಕಿನ ಹಲವು ಗ್ರಾಮಗಳ ರೈತರ ಜಮೀನಿಗೆ ಧಾರವಾಡ ಕೃಷಿ ವಿದ್ಯಾಲಯದ ಪೀಡೆ ಸರ್ವೇಕ್ಷಣಾ ಸಮೀತಿಯ ತಜ್ಞರು ಭೇಟಿ,ನೀಡಿ ರೈತರ ಬೆಳೆಗಳಿಗೆ ತಗುಲುವ ರೋಗದ ಬಗ್ಗೆ ಮಾಹಿತಿ ನೀಡಿದರು.
ಕುಂದಗೋಳ: ಪಟ್ಟಣ, ಪುರ, ಬೆನಕನಹಳ್ಳಿ ಮತ್ತು ಮುಳ್ಳೊಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಶನಿವಾರ ಭೇಟಿ ನೀಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪೀಡೆ ಸರ್ವೇಕ್ಷಣಾ ಸಮಿತಿಯು ಹೆಸರು, ಉದ್ದು, ಸೋಯಾಬೀನ್, ಶೇಂಗಾ ಮತ್ತು ಹತ್ತಿ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟಗಳ ನಿರ್ವಹಣೆಯ ಕುರಿತು ರೈತರಿಗೆ ಮಾಹಿತಿ ನೀಡಿತು. ಸಮಿತಿಯಲ್ಲಿ ಕೀಟತಜ್ಞ ಎಸ್.ಎನ್. ಜಾದವ್, ಸಸ್ಯ ರೋಗ ತಜ್ಞ ಪಿ. ನಾಗರಾಜ ಹಾಗೂ ಒಂಟೆ ಬೇಸಾಯ ತಜ್ಞರಾದ ಸಂತೋಷ್ ಅವರು ಉಪಸ್ಥಿತರಿದ್ದರು.
ಹೆಸರು ಮತ್ತು ಉದ್ದು ಬೆಳೆಗಳ ನಿರ್ವಹಣೆ
ಕೀಟತಜ್ಞ ಎಸ್.ಎನ್. ಜಾದವ್ ಅವರು ಮಾತನಾಡಿ, ಹೆಸರು ಮತ್ತು ಉದ್ದು ಬೆಳೆಗಳಲ್ಲಿ ನಂಜು ರೋಗವು ಎಲೆಗಳ ಮೇಲೆ ಹಳದಿ ಮಚ್ಚೆಗಳನ್ನುಂಟು ಮಾಡುತ್ತದೆ. ಇದರಿಂದ ಗಿಡಗಳು ಕುಳ್ಳಾಗಿ ಬೆಳೆದು ಕಾಯಿ ಬಿಡುವುದು ನಿಲ್ಲುತ್ತದೆ. ರೋಗ ನಿಯಂತ್ರಣಕ್ಕಾಗಿ ರೋಗಪೀಡಿತ ಸಸ್ಯಗಳನ್ನು ತಕ್ಷಣವೇ ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗ ಹರಡದಂತೆ ತಡೆಯಲು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ (0.5 ಮಿ.ಲಿ) ಅಥವಾ ಥೈಯಾಮಿಥಾಕ್ಸಮ್ (1 ಗ್ರಾಂ) ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು.
ಇದೇ ವೇಳೆ, ಕರಿಮೂತಿ ಹುಳು ಮತ್ತು ಬೂದಿ ರೋಗಗಳ ನಿರ್ವಹಣೆಗೂ ಅವರು ಸಲಹೆ ನೀಡಿದರು. ಕರಿಮೂತಿ ಹುಳುವನ್ನು ನಿಯಂತ್ರಿಸಲು ಲ್ಯಾಮಡಾಸ್ಕಲೋಥ್ರಿನ್ 5 ಇ.ಸಿ (0.5 ಮಿ.ಲಿ) ಅಥವಾ ಪ್ರೊಫೆನೋಫಾಸ್ 50 ಇ.ಸಿ (2 ಮಿ.ಲಿ) ಸಿಂಪಡಿಸಬೇಕು. ಬೂದಿ ರೋಗ ಹತೋಟಿಗೆ ಹೆಕ್ಸಾಕೊನಾಜೋಲ್ 5 ಇ.ಸಿ (1 ಮಿ.ಲಿ), ಪ್ರೊಪಿಕೋನಾಜೋಲ್ 25 ಇ.ಸಿ (1 ಮಿ.ಲಿ), ಅಥವಾ ಕಾರ್ಬನ್ಡಜಿಮ್ ಶಿಲೀಂಧ್ರನಾಶಕ (1 ಗ್ರಾಂ) ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಸೂಚಿಸಿದರು.
ಸೋಯಾಬೀನ್ ಮತ್ತು ಶೇಂಗಾ ಬೆಳೆಗಳ ನಿರ್ವಹಣೆ
ಸಸ್ಯ ರೋಗ ತಜ್ಞ ಪಿ. ನಾಗರಾಜ ಅವರು ಸೋಯಾಬೀನ್ ಬೆಳೆಯ ಕುರಿತು ಮಾಹಿತಿ ನೀಡಿದರು. ಬೆಳೆ 50 ದಿನಗಳಾಗಿದ್ದಾಗ ಕೀಟ ನಿಯಂತ್ರಣಕ್ಕಾಗಿ ಲ್ಯಾಮಡಾಸ್ಕಲೋಥ್ರಿನ್ 5 ಇ.ಸಿ (0.5 ಮಿ.ಲಿ), ಕೋರಾನ್ಟ್ರಾನಿಲಿಪ್ರೊಲ್ (0.2 ಮಿ.ಲಿ), ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್ 5 ಇ.ಸಿ (0.5 ಮಿ.ಲಿ) ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಸಲಹೆ ನೀಡಿದರು. ಅಲ್ಲದೆ, ಸೋಯಾಬೀನ್ನಲ್ಲಿ ಕಾಣಿಸಿಕೊಳ್ಳುವ ತುಕ್ಕು ರೋಗದ ನಿರ್ವಹಣೆಗಾಗಿ ಹೆಕ್ಸಾಕೊನಾಜೋಲ್ 5 ಇ.ಸಿ (1 ಮಿ.ಲಿ), ಪ್ರೊಪಿಕೋನಾಜೋಲ್ 25 ಇ.ಸಿ (1 ಮಿ.ಲಿ), ಟೆಬುಕೊನಾಜೋಲ್ (1 ಮಿ.ಲಿ), ಅಥವಾ ಬೇವಿನ ಎಣ್ಣೆ (10 ಮಿ.ಲಿ) ಬೆರೆಸಿ ಸಿಂಪಡಿಸಬೇಕು. ರೋಗ ತೀವ್ರವಾಗಿದ್ದರೆ, 15 ದಿನಗಳ ನಂತರ ಮತ್ತೊಮ್ಮೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ಶೇಂಗಾ ಬೆಳೆಯ ಕೀಟಗಳ ನಿಯಂತ್ರಣ
ಶೇಂಗಾ ಬೆಳೆಯ ಎಲೆ ಸುರುಳಿ ಪೂಚಿ ಹುಳುವಿನ ನಿರ್ವಹಣೆಗಾಗಿ ಅಸಿಫೇಟ್ 75 ಎಸ್.ಸಿ (1 ಗ್ರಾಂ), ಮಾನೋಕ್ರೋಟೋಫಾಸ್ 36 ಎಸ್.ಎಲ್ (1 ಮಿ.ಲಿ), ಅಥವಾ ಫ್ಲೂಬೆಂಡಿಯಮೈಡ್ (1 ಮಿ.ಲಿ) ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವನ್ನು ನಿಯಂತ್ರಿಸಲು ಇಮಾಮೆಕ್ಟಿನ್ ಬೆಂಜೋಯೇಟ್ (0.2 ಗ್ರಾಂ) ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್ 5 ಇ.ಸಿ (0.5 ಮಿ.ಲಿ) ಬೆರೆಸಿ ಸಿಂಪಡಿಸಲು ಅವರು ರೈತರಿಗೆ ಸಲಹೆ ನೀಡಿದರು. ಸಂದರ್ಭದಲ್ಲಿ ಪೀಡೆ ಸರ್ವೇಕ್ಷಣಾ ಸಮಿತಿಯ ಸದಸ್ಯ ಸಂತೋಷ, ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಹಾಗೂ ಇತರ ರೈತ ಮುಖಂಡರು ಉಪಸ್ಥಿತರಿದ್ದರು.

