
ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿದೆ ಎನ್ನಲಾದ ಭೂಪರಿಹಾರ ಹಗರಣದ ಕುರಿತು ಜನಜಾಗೃತಿ ಸಂಘದ ಬಸವರಾಜ ಕೋರವರ ಅವರು ಮಾಧ್ಯಮದೊಂದಿಗೆ ಮಾತನಾಡಿ ಗಂಭೀರ ಆರೋಪಗಳನ್ನು ಮಾಡಿದ್ದು, ಸರ್ಕಾರದ ಮೌನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ) ಈಗಾಗಲೇ ದೋಷಾರೋಪಣ ಪಟ್ಟಿಯಲ್ಲಿ ಹಗರಣದ ಭೀಭತ್ಸ ರೂಪವನ್ನು ಬಯಲಿಗೆಳೆದಿದ್ದರೂ, ಕೆಐಎಡಿಬಿಯ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಗರಣದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಅವರು ದೂರಿದ್ದಾರೆ. ಈ ಹಗರಣದಲ್ಲಿ ದಯಾನಂದ ಭಂಡಾರಿ ಅವರಿಗೆ ಒಂದು ಇನ್ನೋವಾ ಕಾರು ಮತ್ತು 50 ಲಕ್ಷ ರೂಪಾಯಿ ನೀಡಲಾಗಿದೆ ಎಂಬ ಅಂಶ ಬಹಿರಂಗವಾಗಿದ್ದು, ಅಧಿಕಾರಿ ಎನ್. ವಾಣಿ ಅವರ ಮನೆಯಲ್ಲಿ 1.50 ಕೋಟಿ ರೂಪಾಯಿ ನಗದು ಪತ್ತೆಯಾಗಿರುವುದು ಹಗರಣಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಕಚೇರಿಯ ಅಧಿಕಾರಿಗಳಾದ ಮಂಜುನಾಥ ಮುದಕವಿ, ಎಲ್. ಶ್ರೀನಿವಾಸ ಹಾಗೂ ಇತರ ಸಿಬ್ಬಂದಿಗಳ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದ್ದರೂ ಯಾವುದೇ ಇಲಾಖಾ ತನಿಖೆ ನಡೆಯದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಹಗರಣದ ಪ್ರಮುಖ ಅಂಶವೆಂದರೆ 2010-11ರಲ್ಲಿ ಈಗಾಗಲೇ ಪರಿಹಾರ ಪಡೆದಿದ್ದ ಜಮೀನುಗಳಿಗೆ 2021-22ರಲ್ಲಿ ಮತ್ತೊಮ್ಮೆ ನಿಯಮಬಾಹಿರವಾಗಿ ಹಣ ಪಾವತಿಸಿರುವುದು. ಅಂದಿನ ಅವಧಿಯಲ್ಲಿ ಧಾರವಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನೇ ಇಂದಿಗೂ ಅಲ್ಲೇ ಮುಂದುವರಿಸಲಾಗುತ್ತಿದ್ದು, ಇದು ತನಿಖೆಗೆ ಅಡ್ಡಿಯಾಗಿದೆ. ತನಿಖಾಧಿಕಾರಿಗಳು ಕಡತಗಳನ್ನು ಕೇಳಿದಾಗ ಅವುಗಳು ‘ಕಳೆದುಹೋಗಿವೆ’ ಎಂಬ ಹಾರಿಕೆಯ ಉತ್ತರ ನೀಡಲಾಗುತ್ತಿದೆ. ಸಚಿವರಾದ ಎಂ.ಬಿ. ಪಾಟೀಲರು ಸದನದಲ್ಲಿ ಈ ಅಕ್ರಮದ ಮೊತ್ತ 19.50 ಕೋಟಿ ರೂಪಾಯಿ ಎಂದು ಹೇಳಿದ್ದರೂ, ಇ.ಡಿ ನೀಡಿರುವ ಅಂಕಿ-ಅಂಶಗಳ ಪ್ರಕಾರ ಇದು 72 ಕೋಟಿ ರೂಪಾಯಿಗೂ ಅಧಿಕವಾಗಿದೆ. ಜನಜಾಗೃತಿ ಸಂಘದ ಅಂದಾಜಿನಂತೆ ಇದು 84 ಕೋಟಿ ರೂಪಾಯಿ ಮೀರಿದ ಹಗರಣವಾಗಿದ್ದು, ನಾಪತ್ತೆಯಾಗಿರುವ ಕಡತಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ಸಂಬಂಧಪಟ್ಟ ಎಲ್ಲಾ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಕೋರವರ ಒತ್ತಾಯಿಸಿದ್ದಾರೆ.
ಇಂದಿಗೂ ಕಚೇರಿಯಲ್ಲಿರುವ ಸಿಬ್ಬಂದಿಗಳು ಜಾಮೀನಿನ ಮೇಲೆ ಹೊರಗಿರುವ ಮಧ್ಯವರ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಚೇರಿಯ ಕ್ಯಾಬಿನ್‌ಗಳಲ್ಲಿಯೇ ಕುಳಿತು ಅಕ್ರಮ ಎಸಗುತ್ತಿರುವ ದೃಶ್ಯಗಳನ್ನು ಮಾಧ್ಯಮಗಳಲ್ಲಿ ತೋರಿಸಿದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಕಚೇರಿಯ ಅವಧಿಯ ನಂತರ ಹೊಟೇಲ್‌ಗಳಲ್ಲಿ ಕುಳಿತು ವ್ಯವಹಾರ ಕುದುರಿಸುವ ಭ್ರಷ್ಟ ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ತೆಗೆದುಹಾಕಬೇಕು. ಜಮೀನು ಮಾಲೀಕರು ಖೊಟ್ಟಿ ದಾಖಲೆ ನೀಡಿ ಎರಡನೇ ಬಾರಿ ಹಣ ಪಡೆದಿರುವುದು ಸಾಬೀತಾಗಿದ್ದರೂ, ಅವರಿಂದ ಹಣ ವಸೂಲಿ ಮಾಡಲು ‘ರಿಕವರಿ ಸ್ಯೂಟ್’ ದಾಖಲಿಸದ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಪರೋಕ್ಷವಾಗಿ ಈ ಹಗರಣದ ಪಾಲುದಾರರಾಗಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಹಗರಣದ ಹಣದಿಂದಲೇ ಏಜೆಂಟರು ಮತ್ತು ಸಿಬ್ಬಂದಿಗಳು ಹೊಸವಾಳ, ಹೆಗ್ಗೇರಿ, ರಾಮಾಪುರ ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳನ್ನೇ ಖರೀದಿಸಿದ್ದು, ಈಗ ಮತ್ತೆ ಸರ್ಕಾರದ ಹಣವನ್ನೇ ಲೂಟಿ ಮಾಡಲು ಹೊಂಚು ಹಾಕುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಹಣವನ್ನು ಬಡ್ಡಿ ಸಮೇತ ಮರುಪಡೆಯಲು ಮಂಡಳಿಗೆ ಅವಕಾಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಕ್ರಮವಾಗಿ ಪಾವತಿಯಾದ ಪೂರ್ಣ ಮೊತ್ತವನ್ನು ವಸೂಲಿ ಮಾಡಬೇಕು ಮತ್ತು ಅಲ್ಲಿಯವರೆಗೆ ತಪ್ಪಿತಸ್ಥರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಯಾವುದೇ ವಹಿವಾಟು ನಡೆಯದಂತೆ ನಿಗಾವಹಿಸಬೇಕು ಎಂದು ಬಸವರಾಜ ಕೋರವರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

