ಮದ್ಯ ಮಾರಾಟದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ; ಆದಾಯದಲ್ಲಿ ಭಾರಿ ಪ್ರಗತಿ

Spread the love

ಬೆಂಗಳೂರು:
ಮದ್ಯ ಮಾರಾಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಮತ್ತೆ ಅಗ್ರಸ್ಥಾನಕ್ಕೇರಿದೆ. ದಕ್ಷಿಣದ ರಾಜ್ಯಗಳು ಮದ್ಯ ಸೇವನೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿರುವ ನಡುವೆಯೇ, ಕರ್ನಾಟಕವು ಈ ಬಾರಿ 6.88 ಕೋಟಿ ಕೇಸ್‌ಗಳ ಮಾರಾಟದೊಂದಿಗೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇದು ದೇಶದ ಒಟ್ಟು ಮದ್ಯ ಮಾರಾಟದಲ್ಲಿ ಶೇಕಡಾ 17ರಷ್ಟು ಕೊಡುಗೆಯಾಗಿದೆ ಎಂದು ಭಾರತೀಯ ಆಲೊಹಾಲ್ಯುಕ್ತ ಪಾನೀಯ ಕಂಪನಿಗಳ ಒಕ್ಕೂಟದ ವರದಿಯಿಂದ ತಿಳಿದುಬಂದಿದೆ.

ದಕ್ಷಿಣದ ರಾಜ್ಯಗಳೇ ಪ್ರಬಲ
ದಕ್ಷಿಣದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮಾರಾಟದಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಈ ರಾಜ್ಯಗಳ ಜನರು ಒಟ್ಟಾಗಿ 23.18 ಕೋಟಿ ಬಾಕ್ಸ್ ಮದ್ಯ ಸೇವಿಸುತ್ತಾರೆ ಎಂದು ವರದಿಯಾಗಿದೆ. ಈ ಆರು ಪ್ರದೇಶಗಳ ಜನರು ದೇಶದ ಒಟ್ಟು ಮದ್ಯದ ಶೇಕಡಾ 58ರಷ್ಟು ಪ್ರಮಾಣವನ್ನು ಸೇವಿಸಿದರೆ, ಉಳಿದ ಎಲ್ಲಾ ರಾಜ್ಯಗಳು ಕೇವಲ 42ರಷ್ಟು ಮದ್ಯವನ್ನು ಸೇವಿಸುತ್ತವೆ.

ಪಟ್ಟಿಯಲ್ಲಿ ಕರ್ನಾಟಕದ ನಂತರದ ಸ್ಥಾನದಲ್ಲಿ ತಮಿಳುನಾಡು (6.47 ಕೋಟಿ ಕೇಸ್), ತೆಲಂಗಾಣ (3.71 ಕೋಟಿ ಕೇಸ್), ಮತ್ತು ಆಂಧ್ರಪ್ರದೇಶ (3.55 ಕೋಟಿ ಕೇಸ್) ಇವೆ. ಕೇರಳವು 2.29 ಕೋಟಿ ಕೇಸ್‌ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ.

ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾರ್ವತ್ರಿಕ ಚುನಾವಣೆಗಳು ಮತ್ತು ಕೆಲವು ರಾಜ್ಯಗಳಲ್ಲಿನ ಅಬಕಾರಿ ನೀತಿ ಸಮಸ್ಯೆಗಳಿಂದಾಗಿ ಮದ್ಯ ಮಾರಾಟವು ಕುಂಠಿತಗೊಂಡಿತ್ತು. ಆದಾಗ್ಯೂ, ಪ್ರೀಮಿಯಂ ವಿಸ್ಕಿ, ರಮ್ ಮತ್ತು ವೋಡ್ಕಾಗಳತ್ತ ಕಂಪನಿಗಳು ಹೆಚ್ಚು ಗಮನ ಹರಿಸುತ್ತಿರುವುದು ಕಂಡುಬಂದಿದೆ.

₹16,358 ಕೋಟಿ ಆದಾಯ: ಶೇ. 40ರಷ್ಟು ಪ್ರಗತಿ
ಮದ್ಯ ಮಾರಾಟದಿಂದ ಸರ್ಕಾರ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಗಳಿಸಿದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ನೀಡಿರುವ ಹೇಳಿಕೆ ಪ್ರಕಾರ, 2025-26ನೇ ಸಾಲಿನಲ್ಲಿ ₹40,000 ಕೋಟಿ ಆದಾಯದ ನಿರೀಕ್ಷೆ ಇದ್ದು, ಆಗಸ್ಟ್ ವೇಳೆಗೆ ₹16,358.76 ಕೋಟಿ ಸಂಗ್ರಹಿಸುವ ಮೂಲಕ ಶೇ. 40ರಷ್ಟು ಪ್ರಗತಿ ಸಾಧಿಸಲಾಗಿದೆ.

ಮೊದಲ ಎರಡು ತ್ರೈಮಾಸಿಕದಲ್ಲಿ ₹16,290 ಕೋಟಿ ಆದಾಯದ ನಿರೀಕ್ಷೆ ಇತ್ತು. ಆದರೆ, ವಾಸ್ತವವಾಗಿ ₹16,358 ಕೋಟಿ ಆದಾಯ ಬಂದಿದ್ದು, ನಿರೀಕ್ಷೆಗಿಂತ ₹68.78 ಕೋಟಿ ಹೆಚ್ಚು ಸಂಗ್ರಹವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮದ್ಯದ ಬೆಲೆ ಮೂರು ಬಾರಿ ಏರಿಕೆಯಾಗಿದೆ ಹಾಗೂ ಅಬಕಾರಿ ಸಂಬಂಧಿತ ಲೈಸೆನ್ಸ್‌ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಆದರೂ, ಕನ್ನಡಿಗರು ಮದ್ಯ ಸೇವನೆ ನಿಲ್ಲಿಸಿಲ್ಲ ಎಂದು ಅಂಕಿಅಂಶಗಳು ಹೇಳುತ್ತಿವೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ, 5 ವರ್ಷಗಳಿಗೊಮ್ಮೆ ಆನ್‌ಲೈನ್ ಮೂಲಕ ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ ಮತ್ತು ಸಿಎಲ್-7 ಪರವಾನಗಿ ನೀಡುವ ಹಂತವನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *