ರೈತರ ದಾರಿಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಹತ್ವದ ಆದೇಶ

Spread the love

ಬೆಂಗಳೂರು: ರಾಜ್ಯದ ರೈತರ ಜಮೀನುಗಳಿಗೆ ಸಂಬಂಧಿಸಿದ ಕಾಲುದಾರಿ, ಬಂಡಿದಾರಿ ಹಾಗೂ ದಾರಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರೈತರು ತಮ್ಮ ವ್ಯವಸಾಯದ ಉದ್ದೇಶಕ್ಕಾಗಿ ಕೃಷಿ ಸಲಕರಣೆಗಳನ್ನು ಸಾಗಿಸಲು ಬಳಸುವ ದಾರಿಗಳಲ್ಲಿ ಅನೇಕ ಅಡಚಣೆಗಳು ಎದುರಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲು ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ರಾಜ್ಯದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆ ಬೆಳೆಸಲು, ಫಸಲು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳ ಮೂಲಕವೇ ತಿರುಗಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ, ಕೆಲವು ಭೂಮಾಲೀಕರು ಆ ದಾರಿಗಳನ್ನು ಮುಚ್ಚುವ ಮೂಲಕ ರೈತರಿಗೆ ತೊಂದರೆ ಉಂಟುಮಾಡುತ್ತಿರುವುದು ಹಾಗೂ ವೈಯಕ್ತಿಕ ದ್ವೇಷ, ಅಸೂಯೆಗಳ ಪರಿಣಾಮವಾಗಿ ರೈತರ ಮಧ್ಯದಲ್ಲಿಯೇ ಗಲಾಟೆಗಳು ಸಂಭವಿಸುತ್ತಿರುವುದು ಮಾಧ್ಯಮಗಳ ವರದಿಗಳಿಂದ ಮತ್ತು ಸಾರ್ವಜನಿಕ ಮನವಿಗಳಿಂದ ಸರ್ಕಾರದ ಗಮನಕ್ಕೆ ಬಂದಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ಹಾಗೂ Indian Easement Act, 1882 ರ ಪ್ರಕಾರ, ರೈತರಿಗೆ ದಾರಿಯ ಹಕ್ಕು, ಪ್ರವೇಶ ಹಾಗೂ ವಹಿವಾಟಿನ ಹಕ್ಕುಗಳಿವೆ. ಈ ಹಕ್ಕಿಗೆ ಯಾವುದೇ ಬಾಜುದಾರರಿಂದ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ, Code of Criminal Procedure, 1973ರ ಸೆಕ್ಷನ್ 147 ಪ್ರಕಾರ, ಭೂಮಿ ಮತ್ತು ನೀರಿನ ಹಕ್ಕು ಬಳಕೆಯಿಂದ ಸ್ಥಳೀಯ ಶಾಂತಿಗೆ ಭಂಗ ಉಂಟಾದಲ್ಲಿ ತಹಶೀಲ್ದಾರ್‌ಗಳು ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಹುದ್ದೆಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ.

ಅದರಂತೆ, ತಹಶೀಲ್ದಾರ್‌ಗಳಿಗೆ ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳನ್ನು ಯಾವುದೇ ವ್ಯಕ್ತಿ ಮುಚ್ಚಿದರೆ ಅವುಗಳನ್ನು ತೆರವುಗೊಳಿಸಿ, ರೈತರು ಸುಗಮವಾಗಿ ಬಳಸಲು ಕ್ರಮ ಜರುಗಿಸಬೇಕೆಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ಇದರಿಂದ ಬಹುಕಾಲದಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರಿಗೆ ದಾರಿಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಮೂಡಿದೆ.

Leave a Reply

Your email address will not be published. Required fields are marked *