ಕನವಳ್ಳಿ ಆದರ್ಶಗಳ ಕಣಜವಾಗಿದ್ದರು: ಶಶಿ ಸಾಲಿ ಅಭಿಮತ

Spread the love

ಧಾರವಾಡ: ಪ್ರೊ. ಸದಾನಂದ ಕನವಳ್ಳಿ ಒಬ್ಬ ವಿದ್ವತ್ಪೂರ್ಣ ಬರಹಗಾರರಾಗಿದ್ದರು. ಸಂಗೀತ ಮತ್ತು ಕ್ರೀಡೆಗಳಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು ಎಂದು ಅತಿಥಿ ಉಪನ್ಯಾಸಕ ಶಶಿ ಸಾಲಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ‘ಆದರ್ಶಗಳ ಕಣಜವಾಗಿದ್ದ ಸದಾನಂದ ಕನವಳ್ಳಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಪ್ರೊ. ಕನವಳ್ಳಿ ಶಿಸ್ತು, ಸಮಯಪ್ರಜ್ಞೆ, ಮತ್ತು ಸೌಜನ್ಯದ ಇನ್ನೊಂದು ಹೆಸರಾಗಿದ್ದರು. ವೃತ್ತಿಜೀವನದಲ್ಲಿ ಅತ್ಯಂತ ದಕ್ಷರಾಗಿದ್ದ ಅವರು ಹಲವು ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದರು. ಪ್ರೀತಿ ಮತ್ತು ಸ್ನೇಹದಲ್ಲಿ ಅವರಿಗೆ ಸರಿಸಾಟಿ ಇರಲಿಲ್ಲ. ಅತಿಥಿ ಸತ್ಕಾರಕ್ಕೂ ಅವರು ಹೆಸರುವಾಸಿಯಾಗಿದ್ದರು. ಒಬ್ಬ ಕ್ರೀಡಾಪ್ರೇಮಿಯಾಗಿ ಅವರು ಒಲಿಂಪಿಕ್ಸ್‌ನ ಇತಿಹಾಸದ ಬಗ್ಗೆ ಕೃತಿ ರಚಿಸಿದ್ದಾರೆ ಎಂದು ತಿಳಿಸಿದರು.

ಕವಿವಿ ಪ್ರಸಾರಾಂಗಕ್ಕೆ ಹೊಸ ದಾಖಲೆ
ಕವಿವಿ ಪ್ರಸಾರಾಂಗದ ನಿರ್ದೇಶಕರಾಗಿ ಅಲ್ಪಾವಧಿಯಲ್ಲಿಯೇ 110ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ ದಾಖಲೆ ಪ್ರೊ. ಕನವಳ್ಳಿ ಅವರದು. ಅನೇಕ ಸಂಪಾದಿತ ಮತ್ತು ಅನುವಾದಿತ ಕೃತಿಗಳನ್ನೂ ಅವರು ರಚಿಸಿದ್ದಾರೆ. ಅವರು ಎಂದಿಗೂ ಹೆಸರು ಅಥವಾ ಸ್ವಾರ್ಥಕ್ಕಾಗಿ ಕೆಲಸ ಮಾಡಿದವರಲ್ಲ. ಅಂತಹ ಮಹನೀಯರನ್ನು ಸ್ಮರಿಸುವುದೇ ಒಂದು ಭಾಗ್ಯ ಎಂದು ಸಾಲಿ ಹೇಳಿದರು.

ಧರ್ಮಮಾರ್ಗದಲ್ಲಿ ನಡೆದ ಧರ್ಮವಂತರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರೇಮಲ್ಲೂರ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ ಮಾತನಾಡಿ, ಪ್ರೊ. ಸದಾನಂದ ಕನವಳ್ಳಿ ಧರ್ಮಮಾರ್ಗದಲ್ಲಿ ನಡೆದ ಧರ್ಮವಂತರು. ಅವರ ಕುರಿತು ಕೇಳುವ ಮತ್ತು ಸ್ಮರಿಸುವ ನಾವೇ ಭಾಗ್ಯವಂತರು. ಸರಳ ಬದುಕು ಅವರ ಜೀವನದ ಉಸಿರಾಗಿತ್ತು ಎಂದರು.

ವೇದಿಕೆಯಲ್ಲಿದ್ದ ದತ್ತಿ ದಾನಿ ವಿರೇಶ ಕನವಳ್ಳಿ, ತಮ್ಮ ದೊಡ್ಡಪ್ಪನವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಇದೇ ವೇಳೆ, ಕನವಳ್ಳಿ ಅವರ ಮಗಳು, ರಾಯಚೂರಿನ ಸಂಗೀತಗಾರ್ತಿ ಶ್ರೀಮತಿ ಸರಿತಾ ಮಹೇಶ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಸತೀಶ ತುರಮರಿ, ವೀರಣ್ಣ ಒಡ್ಡೀನ, ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಡಾ. ಶಿವಾನಂದ ಶೆಟ್ಟರ ಸೇರಿದಂತೆ ಅನೇಕ ಅಭಿಮಾನಿಗಳು, ಶಿಷ್ಯರು ಮತ್ತು ಕುಟುಂಬದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *