ಸಾರ್ವಜನಿಕ ಸೇವೆಗೆ ಸದಾ ಬದ್ಧ: ಸಚಿವ ಸಂತೋಷ ಲಾಡ್

Spread the love

ಕಲಘಟಗಿ: ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಕಲಘಟಗಿ ಪಟ್ಟಣದ ಹೊರವಲಯದ ಮಡಕಿಹೊನ್ನಳ್ಳಿ ಅಮೃತ ನಿವಾಸದಲ್ಲಿ ಇತ್ತಿಚ್ಚಿಗೆ ಹಮ್ಮಿಕೊಂಡಿದ್ದ ಉಚಿತ ಶ್ರವಣದೋಷ ಚಿಕಿತ್ಸಾ ಶಿಬಿರದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧಕಗಳನ್ನು ವಿತರಿಸಿದ ಸಚಿವ ಸಂತೋಷ ಲಾಡ್ ಅವರು, ಸಾರ್ವಜನಿಕ ಸೇವೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
“ನಾನು ನಿಮ್ಮಂತ ಸಣ್ಣ ಕುಟುಂಬದಲ್ಲಿ ಬೆಳೆದಿದ್ದೇನೆ. ಬಡವರ ಕಷ್ಟ, ನೋವುಗಳ ಅರಿವು ನನಗಿದೆ. ಕಾರ್ಮಿಕ ಸಚಿವನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾದ ಕಾರಣ ಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡಲು ಆಗಿಲ್ಲ. ಆದರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ,” ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಲಾಡ್ ಫೌಂಡೇಶನ್‌ನಿಂದ ಜನಪರ ಕಾರ್ಯಕ್ರಮಗಳು
ಸಂತೋಷ ಲಾಡ್ ಫೌಂಡೇಶನ್ ಹಾಗೂ ಶ್ರೀನಿವಾಸ ಹೆಲ್ತ್ ಕೇರ್ ಬೆಂಗಳೂರು ಸಹಯೋಗದಲ್ಲಿ ನಡೆದ ಈ ಉಚಿತ ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 240ಕ್ಕೂ ಹೆಚ್ಚು ಜನರಿಗೆ ಶ್ರವಣ ಸಾಧಕಗಳನ್ನು ವಿತರಿಸಲಾಗಿದೆ. ಎಂದು ಪೌಂಡೇಶನವರು ತಿಳಿಸಿದರು.

ನಂತರ ಮಾತನಾಡಿದ ಸಚಿವರು, ಫೌಂಡೇಶನ್ ಮೂಲಕ ಬಡ ಮಕ್ಕಳ ಶಿಕ್ಷಣ, ಯುವಕರಿಗೆ ಉದ್ಯೋಗ ಮೇಳ, ಕ್ರೀಡಾ ಚಟುವಟಿಕೆಗಳು, ಆರೋಗ್ಯ ಶಿಬಿರಗಳು ಮತ್ತು ನಿರಂತರ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಹತ್ತು ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ ಅವರು, “ಕ್ಷೇತ್ರದ ಯಾರೂ ಕೂಡಾ ಅನ್ಯತಾ ಭಾವಿಸಬಾರದು, ನನ್ನ ಶಕ್ತಿ ಮೀರಿ ನಿಮ್ಮ ಸೇವೆ ಮಾಡುತ್ತೇನೆ” ಎಂದು ಜನರಿಗೆ ಭರವಸೆ ನೀಡಿದರು.

ಜಾತಿ ವ್ಯವಸ್ಥೆಯಿಂದ ಹೊರಬನ್ನಿ
ರಾಜಕೀಯವನ್ನು ಮೀರಿ ಸಾರ್ವಜನಿಕರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ಯತ್ನಿಸಿದ ಸಚಿವರು, ನಾವೆಲ್ಲರೂ ಜಾತಿ ವ್ಯವಸ್ಥೆಯಿಂದ ಹೊರಬಂದು ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾನ್ ನಾಯಕರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಬಾಳಬೇಕು ಎಂದು ಕರೆ ನೀಡಿದರು. ಇಂದಿನ ಯುವ ಪೀಳಿಗೆ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರು, ಬಸವರಾಜ ಭಾವಕರ, ಬಿ.ವೈ. ಪಾಟೀಲ, ಯಲ್ಲಪ್ಪ ಚವರಗಿ, ಲಿಂಗರಡ್ಡಿ ನಡುವಿನಮನಿ, ಅಜರುದ್ದೀನ್ ಜಕಾತಿ, ಶಂಕರಲಿಂಗ ದಾಸನಕೊಪ್ಪ, ಬಾಳು ಖಾನಾಪುರ, ಶಿವಪುತ್ರಪ್ಪ ಆಲದಕಟ್ಟಿ, ಹನಮಂತ ಚವರಗುಡ್ಡ, ಶಿವಲಿಂಗ ಮುಗಣ್ಣವರ, ಮಂಜುನಾಥ ವಾಲಿಕಾರ, ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *