
ಅವಳಿನಗರದ ಪ್ರಥಮ ಪ್ರಜೆಯ ಕಾರ್ಯತತ್ಪರತೆಗೆ ಒಲಿದ ಅಪೂರ್ವ ಅವಕಾಶ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಜ್ಯೋತಿ ಪಾಟೀಲ್ ಅವರು ಅಖಿಲ ಭಾರತ ಮಹಾಪೌರರ ಮಂಡಳಿಯ (ಆಲ್ ಇಂಡಿಯಾ ಕೌನ್ಸಿಲ್ ಆಫ್ ಮೇಯರ್ಸ್) ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಈ ನೇಮಕವನ್ನು ಮಹಾಪೌರರ ಮಂಡಳಿಯ ನೂತನ ಅಧ್ಯಕ್ಷರಾದ ರೇಣು ಬಾಲಾ ಗುಪ್ತಾ ಅವರು ಪ್ರಕಟಿಸಿದ್ದಾರೆ ಎಂದು ಮಂಡಳಿಯ ಕಾರ್ಯದರ್ಶಿ ಮನೋಜ್ ಗುಪ್ತಾ ತಿಳಿಸಿದ್ದಾರೆ.
ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಅಲ್ಪ ಅವಧಿಯಲ್ಲೇ ಜ್ಯೋತಿ ಪಾಟೀಲ್ ಅವರು ಅವಳಿನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಭರವಸೆ ಹುಟ್ಟಿಸುವಂತಹ ಕಾರ್ಯತತ್ಪರತೆಯನ್ನು ಅವರು ಪ್ರದರ್ಶಿಸಿದ್ದಾರೆ. ಅವರ ಈ ಕಾರ್ಯವೈಖರಿ ಮತ್ತು ಬದ್ಧತೆಗೆ ಪ್ರತಿಯಾಗಿ ಈ ಅಪೂರ್ವ ಅವಕಾಶ ಅರಸಿ ಬಂದಿದೆ ಎನ್ನಲಾಗಿದೆ.
ಜ್ಯೋತಿ ಪಾಟೀಲ್ ಅವರ ಈ ಪ್ರತಿಷ್ಠಿತ ನೇಮಕಕ್ಕೆ ಉಪ ಮಹಾಪೌರ ಸಂತೋಷ ಚೌಹಾಣ್ ಸೇರಿದಂತೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

