
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ದತ್ತಿ ಅಂಗವಾಗಿ ಸೆಪ್ಟೆಂಬರ್ 26, ರಂದು ಸಂಜೆ ೬ ಗಂಟೆಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2025’ ಪ್ರಧಾನ ಸಮಾರಂಭವನ್ನು ಆಯೋಜಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಸೋನಿಯಾ ಎಜ್ಯುಕೇಶನ್ ಟ್ರಸ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಹನುಮಂತ ಡಂಬಳ ಅವರು ವಹಿಸಲಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀಮತಿ ಪೂರ್ಣಾ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ, ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೃತಿಕಾ ಸತ್ಯಬೋದ ಗುತ್ತಲ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ.
ಮೂಲ ಜಾನಪದ ಹಾಡುಗಳ ಸ್ಪರ್ಧೆ
ಕಾರ್ಯಕ್ರಮದ ಪೂರ್ವಭಾವಿಯಾಗಿ, ಅಂದು ಮಧ್ಯಾಹ್ನ ೩ ಗಂಟೆಗೆ ಮೂಲ ಜಾನಪದ ಹಾಡುಗಳ ಸ್ಪರ್ಧೆ ನಡೆಯಲಿದೆ. ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಡಾ. ಆನಂದ ಪಾಂಡುರಂಗಿ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಅಖಿಲ ಭಾರತೀಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಗೀತಗಾರರಾದ ಶೃತಿ ಕುಲಕರ್ಣಿ ಮತ್ತು ರಂಗ ಕಲಾವಿದ ವಿಜಯೇಂದ್ರ ಅರ್ಚಕ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಬಿ. ಗುತ್ತಲ ಮತ್ತು ಸಾಹಿತಿ ಶ್ರೀಮತಿ ಸರೋಜಾರಾವ್ ಅವರು ಸ್ಪರ್ಧೆಯ ಸಂಯೋಜನೆ ನೋಡಿಕೊಳ್ಳಲಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು, ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

