
ನವದೆಹಲಿ: ಭಾರತದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆ ಮಾಡಿದ ‘ಭಾರತದಲ್ಲಿ ರಸ್ತೆ ಅಪಘಾತಗಳು 2023’ ವರದಿಯ ಪ್ರಕಾರ, ಕಳೆದ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇ. 4.2ರಷ್ಟು ಏರಿಕೆಯಾಗಿದೆ. 2023ರಲ್ಲಿ ಒಟ್ಟು 4.8 ಲಕ್ಷ ಅಪಘಾತಗಳು ಸಂಭವಿಸಿದ್ದು, ಪ್ರತಿ ಗಂಟೆಗೆ ಸರಾಸರಿ 20 ಮಂದಿ ಸಾವಿಗೀಡಾಗಿದ್ದಾರೆ.
ವರದಿಯ ಪ್ರಮುಖಾಂಶಗಳು ಹೀಗಿವೆ:
- ಅಪಘಾತ ಮತ್ತು ಸಾವು-ನೋವು: ದೇಶಾದ್ಯಂತ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 4,80,583 ಅಪಘಾತಗಳು ವರದಿಯಾಗಿವೆ. ಇವುಗಳಲ್ಲಿ 1,72,890 ಮಂದಿ ಸಾವಿಗೀಡಾಗಿದ್ದು, 4,62,825 ಜನರು ಗಾಯಗೊಂಡಿದ್ದಾರೆ. ಇದರರ್ಥ, ಪ್ರತಿ ಗಂಟೆಗೆ ಸುಮಾರು 55 ಅಪಘಾತಗಳು ಸಂಭವಿಸಿವೆ.
- ಯುವಕರೇ ಹೆಚ್ಚು ಬಲಿ: ರಸ್ತೆ ಅಪಘಾತಗಳಲ್ಲಿ ಸಾವಿಗೀಡಾದವರಲ್ಲಿ ಬಹುತೇಕರು ಯುವ ಸಮುದಾಯಕ್ಕೆ ಸೇರಿದವರು. 2023ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಶೇ. 66.4 ಮಂದಿ 18ರಿಂದ 45 ವರ್ಷ ವಯಸ್ಸಿನವರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
- ಹೆದ್ದಾರಿಗಳಲ್ಲಿ ಭೀಕರ ಅಪಘಾತಗಳು: ವರದಿಯ ಪ್ರಕಾರ, ಒಟ್ಟು ಅಪಘಾತಗಳಲ್ಲಿ ಶೇ. 31.2ರಷ್ಟು (1,50,177) ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. ರಾಜ್ಯ ಹೆದ್ದಾರಿಗಳಲ್ಲಿ ಶೇ. 22ರಷ್ಟು (1,05,622) ಹಾಗೂ ಇತರೆ ರಸ್ತೆಗಳಲ್ಲಿ ಶೇ. 46.8ರಷ್ಟು (2,24,744) ಅಪಘಾತಗಳು ನಡೆದಿವೆ.
ರಾಜ್ಯವಾರು ವರದಿ: ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದ್ದರೆ, ಸಾವನ್ನಪ್ಪಿದವರ ಸಂಖ್ಯೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಒಟ್ಟು 1,72,890 ಸಾವುಗಳಲ್ಲಿ ಶೇ. 36.5ರಷ್ಟು (63,112) ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಶೇ. 22.8ರಷ್ಟು (39,439) ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಶೇ. 40.7ರಷ್ಟು (70,339) ಇತರ ರಸ್ತೆಗಳಲ್ಲಿ ಸಂಭವಿಸಿವೆ.
ಈ ಅಂಕಿ-ಅಂಶಗಳು ರಸ್ತೆ ಸುರಕ್ಷತೆಯ ಬಗ್ಗೆ ತಕ್ಷಣವೇ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತವೆ. ರಸ್ತೆ ಅಪಘಾತಗಳನ್ನು ತಗ್ಗಿಸಲು ಚಾಲಕರಿಗೆ ವಿಶೇಷ ತರಬೇತಿ ನೀಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

