ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅನುಷ್ಠಾನ: ಯಾವುದೇ ಜಾತಿಗೆ ಅನ್ಯಾಯವಾಗದಂತೆ ರೋಸ್ಟರ್ ಜಾರಿಗೆ ಕ್ರಮ – ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು: ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿಯ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುದುವಾರದಂದು ವಿಧಾನಸೌಧದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದರು.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಒಳ ಮೀಸಲಾತಿ ಕುರಿತಾಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರೋಸ್ಟರ್ ಜಾರಿ ಕುರಿತಾಗಿ ಎಲ್ಲರ ಅಹವಾಲುಗಳನ್ನು ಆಲಿಸಿ, ರೋಸ್ಟರ್‌ನಲ್ಲಿ ಯಾವುದೇ ಜಾತಿಗೆ ಅನ್ಯಾಯವಾಗದಂತೆ ಖಾತ್ರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ನೇಮಕಾತಿ ವಿಚಾರವಾಗಿ ಮಾತನಾಡಿದ ಸಿಎಂ, ಜಾತಿ ಪ್ರಮಾಣ ಪತ್ರವನ್ನು ಯಾವ ರೀತಿಯಲ್ಲಿ ನೀಡಬೇಕು ಎಂಬ ಕುರಿತು ಈಗಾಗಲೇ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ನೇಮಕಾತಿಗೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿದ ಬಳಿಕ ಅಭ್ಯರ್ಥಿಗಳ ವಯೋಮಿತಿಯನ್ನು ಒಂದು ಅವಧಿಗೆ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದಲ್ಲಿ ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಒಳ ಮೀಸಲಾತಿ ಜಾರಿ ಕುರಿತಾಗಿ ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಈ ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ, ಎಚ್. ಸಿ. ಮಹದೇವಪ್ಪ, ಕೆ. ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಎಚ್. ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ. ಆರ್. ತಿಮ್ಮಾಪುರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *