ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಗೋಗಿ ಬಳಿ ₹2.62 ಲಕ್ಷ ಮೌಲ್ಯದ ಅಕ್ಕಿ ಜಪ್ತಿ, ಓರ್ವ ಬಂಧನ

Spread the love

ಯಾದಗಿರಿ: ಶಹಾಪುರ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದಂಧೆ ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಸ್ವಕ್ಷೇತ್ರದಲ್ಲೇ ಈ ಘಟನೆ ನಡೆದಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದಲ್ಲಿ ಪಡಿತರ ಚೀಟಿದಾರರಿಂದ ಖರೀದಿಸಿದ ಅಕ್ಕಿಯನ್ನು ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕ ಬಸವರಾಜ್ ಮತ್ತು ಪಿಎಸ್‌ಐ ದೇವೇಂದ್ರರೆಡ್ಡಿ ಅವರು, ತೆಲಂಗಾಣ ನೋಂದಣಿ ಸಂಖ್ಯೆ ಹೊಂದಿದ್ದ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.

ವಾಹನದಲ್ಲಿದ್ದ 158 ಚೀಲಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ₹2.62 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ. ಪೊಲೀಸರು ಗೂಡ್ಸ್ ವಾಹನ ಮತ್ತು ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆರೋಪಿ ರಾಜು ಪವಾರ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ದೇವರಾಜ ರಾಠೋಡ್ ಪರಾರಿಯಾಗಿದ್ದಾನೆ. ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತರರಾಷ್ಟ್ರೀಯ ಮಟ್ಟಕ್ಕೆ ಅಕ್ಕಿ ರಫ್ತು?
ಕೆಲವು ದಿನಗಳ ಹಿಂದೆ ಗುರುಮಠಕಲ್‌ನಲ್ಲಿಯೂ ಇದೇ ರೀತಿಯ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ಅತ್ಯಾಧುನಿಕ ಯಂತ್ರಗಳಲ್ಲಿ ಪಾಲಿಶ್ ಮಾಡಿ, ‘ಡೈನಾಸ್ಟಿ’, ‘ವೋಲ್ಲಾ ಎಎಎ’, ‘ದಾರಾ ಡಬಲ್ ಸ್ಟಾರ್’ ಮುಂತಾದ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಹೆಸರಿನಲ್ಲಿ 25 ಕೆ.ಜಿ. ಮತ್ತು 10 ಕೆ.ಜಿ. ಪ್ಯಾಕೇಟ್‌ಗಳಲ್ಲಿ ತುಂಬಿಸಿ ಸಿಂಗಾಪುರ, ಫ್ರಾನ್ಸ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲು ಸಿದ್ಧತೆ ನಡೆದಿರುವುದು ಬಯಲಾಗಿತ್ತು.
ಈ ಅಕ್ರಮ ದಂಧೆಯನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರೂ, ಜಿಲ್ಲೆಯಲ್ಲಿ ಅಕ್ಕಿ ಸಾಗಾಟ ದಂಧೆ ನಿಲ್ಲುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ 25 ಕೆ.ಜಿ. ಚೀಲಕ್ಕೆ ₹8,000-₹10,000 ಹಾಗೂ 10 ಕೆ.ಜಿ. ಚೀಲಕ್ಕೆ ₹1,500-₹2,000 ಬೆಲೆಗೆ ಈ ಅಕ್ಕಿಯನ್ನು ಮಾರಾಟ ಮಾಡಲು ಸಂಚು ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *