ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹ: ಕ್ರಮಕ್ಕೆ ಆಗ್ರಹಿಸಿ ಸ್ವಾಭಿಮಾನಿ ಕರವೇ ಪ್ರತಿಭಟನೆ

Spread the love

ರಾಣೇಬೆನ್ನೂರು: ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಇಂತಹ ದಂಧೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ತಾಲೂಕಿನಾದ್ಯಂತ ಹೆಚ್.ಪಿ., ಇಂಡಿಯನ್ ಹಾಗೂ ಭಾರತ ಗ್ಯಾಸ್ ಏಜೆನ್ಸಿಗಳು ಸೇರಿದಂತೆ ವಿವಿಧ ಸಂಸ್ಥೆಗಳು ಎಲ್ಲೆಂದರಲ್ಲಿ ಸಿಲಿಂಡರ್ ವಿತರಣೆ ಮಾಡುವ ಮೂಲಕ ಸಾರ್ವಜನಿಕರನ್ನು ಲೂಟಿ ಮಾಡುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು. ಪ್ರಮುಖವಾಗಿ ಗ್ರಾಮಗಳ ಮಧ್ಯಭಾಗದ ಜನವಸತಿ ಪ್ರದೇಶಗಳಲ್ಲಿ ಹಾಗೂ ಶಾಲಾ ಮಕ್ಕಳು ಸಂಚರಿಸುವ ಸೂಕ್ಷ್ಮ ಸ್ಥಳಗಳಲ್ಲಿ ಅನಧಿಕೃತವಾಗಿ ಸಿಲಿಂಡರ್‌ಗಳನ್ನು ಶೇಖರಿಸಿಡಲಾಗುತ್ತಿದೆ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಈ ಕೃತ್ಯದಿಂದ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷವಾಗಿ ಸುಕ್ಷೇತ್ರ ದೇವರಗುಡ್ಡ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಅನಧಿಕೃತ ಸಂಗ್ರಹಣೆ ಹಾಗೂ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬರುತ್ತಿವೆ. ಕೇಂದ್ರ ಸರ್ಕಾರದ ಯಾವುದೇ ನಿಯಮಾವಳಿಗಳನ್ನು ಪಾಲಿಸದೆ ಏಜೆನ್ಸಿಗಳು ಈ ಅಕ್ರಮದಲ್ಲಿ ತೊಡಗಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಇಂತಹ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ, ನಿಂಗಪ್ಪ ಬೀರಪ್ಪನವರ, ರವಿ ಪಾಠಿ, ಕೃಷ್ಣ ವೇಷಗಾರ, ಮಲ್ಲಪ್ಪ ಮುದ್ದಿ, ಎಂ.ಎನ್. ಬೀರಣ್ಣನವರ, ಮಾಲತೇಶ ಏಳಕುರಿ, ಪ್ರವೀಣ ಏಳಕುರಿ, ಪಿ.ಎನ್. ಕುರವತ್ತಿ ಹಾಗೂ ನಾಗರಾಜ ಏಳಕುರಿ ಸೇರಿದಂತೆ ವೇದಿಕೆಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *