ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ; ನನ್ನದು ಅಭಿವೃದ್ಧಿ ಮಂತ್ರ: ಶಾಸಕ ಎನ್.ಎಚ್. ಕೋನರಡ್ಡಿ

Spread the love

ಅಣ್ಣಿಗೇರಿ: “ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ಅನಗತ್ಯ ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ, ನನ್ನ ಕೆಲಸವೇ ನನಗೆ ಅಭಿವೃದ್ಧಿಯ ಮಂತ್ರವಾಗಿದೆ,” ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು.

​ಅಣ್ಣಿಗೇರಿ ಪಟ್ಟಣದ ಯುಜಿಡಿ (ಒಳಚರಂಡಿ) ಯೋಜನೆಗೆ 124 ಕೋಟಿ ರೂ. ಅನುದಾನ ಮೀಸಲಿಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ನಗರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಲು ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಭವ್ಯ ಮೆರವಣಿಗೆ ಮತ್ತು ಸನ್ಮಾನ

​ಕಾರ್ಯಕ್ರಮದ ಅಂಗವಾಗಿ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಆರಂಭವಾಯಿತು. ಅಗಸಿ ಓಣಿ, ಬಸ್ ನಿಲ್ದಾಣದ ಮುಖಾಂತರ ಸಾಗಿದ ಮೆರವಣಿಗೆಯು ಪುರಸಭೆಯನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಜಾಂಜ್ ಪಥಕ, ಡೊಳ್ಳು ಕುಣಿತದ ಅಬ್ಬರವಿತ್ತು. ಕಾರ್ಯಕರ್ತರು ಶಾಸಕರಿಗೆ ಶಾಲು ಹೊದಿಸಿ, ಬೃಹತ್ ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಸನ್ಮಾನಿಸಿದರು. ಪುರಸಭೆ ವತಿಯಿಂದಲೂ ಶಾಸಕ ಕೋನರಡ್ಡಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಮುಖ್ಯಮಂತ್ರಿಗಳ ಕಾರ್ಯ ಸ್ಮರಣೀಯ

​ಅಭಿನಂದನಾ ಭಾಷಣ ಮಾಡಿದ ಶಾಸಕರು, “ರಾಜ್ಯದ ಆರ್ಥಿಕ ಪರಿಸ್ಥಿತಿ ಸವಾಲಾಗಿದ್ದರೂ ಸಹ ಅಣ್ಣಿಗೇರಿ ಪಟ್ಟಣದ ಒಳಚರಂಡಿ ಯೋಜನೆಗೆ 124 ಕೋಟಿ ರೂ. ನೀಡಿದ ಮುಖ್ಯಮಂತ್ರಿಗಳ ಕಾರ್ಯವನ್ನು ನಾನು ಜೀವನದಲ್ಲಿ ಮರೆಯುವುದಿಲ್ಲ. ಕ್ಷೇತ್ರದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅನುದಾನ ತರಲಾಗಿದೆ. ಕೆಲವರು ಟೀಕೆಗಳನ್ನು ಮಾಡುತ್ತಾರೆ, ಆದರೆ ಆ ಟೀಕೆಗಳೇ ನಮಗೆ ಶ್ರೀರಕ್ಷೆಯಾಗಿ ಕೆಲಸ ಮಾಡಲು ಸ್ಫೂರ್ತಿ ನೀಡಲಿವೆ,” ಎಂದರು.

ಮುಂದಿನ ದಿನಗಳಲ್ಲಿ ಸಚಿವರಾಗಲಿ: ಶಿವಾನಂದ ಬೆಳಹಾರ

​ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಮಾತನಾಡಿ, “ಅಣ್ಣಿಗೇರಿ ಪುರಸಭೆ ವ್ಯಾಪ್ತಿಗೆ ಶಾಸಕರು ಹಲವಾರು ಯೋಜನೆಗಳನ್ನು ತಂದುಕೊಟ್ಟಿದ್ದಾರೆ. ಅದರಲ್ಲೂ 124 ಕೋಟಿ ರೂ.ಗಳ ಒಳಚರಂಡಿ ಯೋಜನೆ ಐತಿಹಾಸಿಕವಾದುದು. ಶಾಸಕರ ಕಾರ್ಯವೈಖರಿ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಅವರು ಸಚಿವರಾಗಿ ಸೇವೆ ಸಲ್ಲಿಸುವಂತಾಗಲಿ,” ಎಂದು ಆಶಿಸಿದರು.

ಆರೋಗ್ಯವನ್ನೂ ಲೆಕ್ಕಿಸದೆ ಅಭಿವೃದ್ಧಿಗೆ ಪಣ: ಡಾ. ಶಿವಕುಮಾರ ಸ್ವಾಮೀಜಿ

​ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಆಶೀರ್ವಚನ ನೀಡಿ, “ನನ್ನ ದೇಹದಲ್ಲಿ ಆರೋಗ್ಯದ ತೊಂದರೆ ಇದ್ದರೂ ಸಹ ಊರಿನ ಅಭಿವೃದ್ಧಿಗಾಗಿ ಪಣತೊಟ್ಟ ಶಾಸಕರನ್ನು ಅಭಿನಂದಿಸಲು ನಾನು ಬಂದಿದ್ದೇನೆ. ಪಟ್ಟಣಕ್ಕೆ ಯುಜಿಡಿ ಯೋಜನೆ ಬಹಳ ಅವಶ್ಯಕವಾಗಿತ್ತು. ಕೋನರಡ್ಡಿ ಅವರು ಸಚಿವರು ಮಾಡುವಂತಹ ಕೆಲಸವನ್ನು ಶಾಸಕರಾಗಿಯೇ ಮಾಡಿ ತಮ್ಮ ಗಟ್ಟಿತನ ಪ್ರದರ್ಶಿಸಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಾಸೋಹ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು, ಜನಾಬ್ ಸಯದ್ ಸಜ್ಜಾದ ಖಾದ್ರಿ, ಅಣ್ಣಿಗೇರಿ ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುದಕಣ್ಣ ಕೋರವರ ಸೇರಿದಂತೆ ಪ್ರಮುಖರಾದ ಇಮಾಮಸಾಬ ದರವಾನ, ನೀಲವ್ವ ಕುರಹಟ್ಟಿ, ಸುಜಾತಾ ಶ್ಯಾನಭೋಗರ, ಈಶ್ವರ ಕಾಳಪ್ಪನವರ, ಬಾಬಾಜಾನ ಮುಲ್ಲಾನವರ, ಸಾಧಿಕ ಠಾಣಿದ, ಎ.ಪಿ. ಗುರಿಕಾರ, ಶಂಕರ ಕುರಿ ಹಾಗೂ ಪುರಸಭೆಯ ಸರ್ವ ಸದಸ್ಯರು, ಪಕ್ಷದ ಮುಖಂಡರು ಮತ್ತು ಅಣ್ಣಿಗೇರಿ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *