

ರಾಮನಗರ (ಸೆ.19): “ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಭಾಷಣ
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದೇನೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಾನು ಜಾತಿ ಮೇಲೆ ನಂಬಿಕೆ ಇಟ್ಟಿರುವವನಲ್ಲ, ನೀತಿ ಮೇಲೆ ನಂಬಿಕೆ ಇಟ್ಟಿರುವವನು. ಬಡವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆ,” ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಬಡವರಿಗೆ ನಿವೇಶನ ಹಂಚಿಕೆ
“ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಬೇಕು ಎಂದು ಜಿಲ್ಲೆಯ ಪ್ರತಿನಿಧಿಗಳ ಸಭೆ ಕರೆದು ಈಗಾಗಲೇ ತೀರ್ಮಾನ ಮಾಡಲಾಗಿದೆ. ಬಗರ್ ಹುಕುಂ ಸೇರಿದಂತೆ, ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾತಿಗೆ ಬಾಕಿ ಇರುವ ಭೂಮಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಕನಕಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಮಹಿಳೆಯರ ಹೆಸರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. “ನಾನು ಸುಮಾರು 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿದ್ದೇನೆ. ಈಗ ಡಿ.ಕೆ.ಸುರೇಶ್ ಅವರಿಗೆ ಈ ಸಮಿತಿಯ ಜವಾಬ್ದಾರಿ ನೀಡಲಾಗಿದೆ,” ಎಂದು ಹೇಳಿದರು.
ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ ಅವರು, “ಅವರು ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಬಡವರಿಗೆ ನಿವೇಶನ ಹಂಚಲು ಆಗಲಿಲ್ಲ. ಹೀಗಿದ್ದ ಮೇಲೆ ರಾಜಕಾರಣ ಏಕೆ ಮಾಡಬೇಕು? ರಾಜಕೀಯ ಮಾಡುವ ಅವಕಾಶವನ್ನೇ ಜನತಾದಳದವರು ಕಳೆದುಕೊಂಡಿದ್ದಾರೆ,” ಎಂದು ವ್ಯಂಗ್ಯವಾಡಿದರು.
“ಮಾಜಿ ಸಚಿವ ಅಶ್ವಥ ನಾರಾಯಣ ಅವರು ಜಿಲ್ಲೆಗೆ ಬಂದಾಗ ‘ವೀರಾಧಿವೀರ ಗಂಡು, ಯಾರಾದರೂ ಗಂಡಸರು ಇದ್ದೀರಾ?’ ಎಂದು ಪ್ರಶ್ನಿಸಿದ್ದರು. ಆದರೆ ಅವರಿಗೂ ಸಹ ಒಂದು ನಿವೇಶನ ಹಂಚಲು ಆಗಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಒಬ್ಬರಿಗೂ ಸಹಾಯ ಮಾಡಲು ಆಗಲಿಲ್ಲ,” ಎಂದು ಕುಟುಕಿದರು.
“ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ತೆಗೆದು ಹಾಕುವುದಾಗಿ ಯಾರೋ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದಾರಂತೆ. ಮಿಸ್ಟರ್ ಅಶೋಕ್, ಅಶ್ವಥ ನಾರಾಯಣ, ಜನತಾ ದಳದ ನಾಯಕರೇ, ನಿಮ್ಮ ಯಾರ ಹಣೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಬರೆದಿಲ್ಲ. ಅಶೋಕಣ್ಣಾ, ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಲು 2028ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಈ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನೀವು ಅಧಿಕಾರ ಮರೆತುಬಿಡಿ,” ಎಂದು ವ್ಯಂಗ್ಯವಾಡಿದರು.
ವಚನ ಚಳುವಳಿಯ ಪ್ರಮುಖರಾದ ಅಲ್ಲಮಪ್ರಭು ಅವರ ವಚನವನ್ನು ಉಲ್ಲೇಖಿಸಿ, “ಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನನ್ನೂ ಮಾಡದವರು ಇನ್ನೆಂದೂ ಕೆಲಸ ಮಾಡಲೂ ಸಾಧ್ಯವಿಲ್ಲ” ಎಂದು ವಿಪಕ್ಷಗಳನ್ನು ಟೀಕಿಸಿದರು.
“ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಸರ್ಕಾರ ನೀಡಿದ ಯೋಜನೆಗಳನ್ನು ಹಾಗೂ ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ ದಾಖಲೆಯಿದ್ದರೆ ನೀಡಬೇಕು,” ಎಂದು ಸವಾಲು ಹಾಕಿದರು.

