ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ: ಆ 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳು

Spread the love

ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ; ಆ. 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳು

ಹುಬ್ಬಳ್ಳಿ: ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಸಮಿತಿಯ ವತಿಯಿಂದ ಆಗಸ್ಟ್ 15 ಮತ್ತು 16ರಂದು ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಆಗಸ್ಟ್ 15ರ ಮಧ್ಯರಾತ್ರಿ ಗೋಕುಲ ರಸ್ತೆಯ ಚೈತನ್ಯನಗರದಲ್ಲಿರುವ ಶ್ರೀ ವರಸಿದ್ದಿ ವಿನಾಯಕ ಮಂದಿರದಲ್ಲಿ ಶ್ರೀ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.
ಹಾಗೆಯೇ, ಆಗಸ್ಟ್ 16ರಂದು ಮಧ್ಯಾಹ್ನ 12 ಗಂಟೆಗೆ ಗೋಕುಲ ರಸ್ತೆಯ ಅಕ್ಷಯ್ ಪಾರ್ಕ್ ಸಂತೆ ಮೈದಾನದಲ್ಲಿ ‘ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ’ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 50,000 ರೂಪಾಯಿಗಳನ್ನು ನೀಡಲಾಗುವುದು.
ಈಗಾಗಲೇ ಆನಂದನಗರ, ನಾವಳ್ಳಿ ಪ್ಲಾಟ್, ಗೋಕುಲ ರಸ್ತೆ ಮಾರುತಿ ನಗರ ಹಾಗೂ ಕುಂದಗೋಳ ಭಾಗಗಳಿಂದ ಆರು ತಂಡಗಳು ತಮ್ಮ ಹೆಸರುಗಳನ್ನು ನೋಂದಾಯಿಸಿವೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ತಂಡಗಳು ಆಗಸ್ಟ್ 15ರ ಒಳಗಾಗಿ 9448110146 ಅಥವಾ 7848948530 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ, ಶಾಸಕರಾದ ಮಹೇಶ್ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಭಾಗವಾಗಿ, ಸುಮಾರು 600ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ ಮತ್ತು ಮಹಿಳಾ ಜಗ್ಗಲಗಿ ತಂಡಗಳು ಕೂಡ ಪಾಲ್ಗೊಳ್ಳಲಿವೆ ಎಂದು ಪ್ರಕಾಶ ಕ್ಯಾರಕಟ್ಟಿ ತಿಳಿಸಿದರು.
ಈ ಸಮಯದಲ್ಲಿ ಕೃಷ್ಣ ಗಂಡಗಾಳೇಕರ, ಕಿರಣ ಭರಾಡೆ, ಗುರುನಾಥ ಮುರಗೋಡ, ಶಂಕರಾಚಾರ್ಯ ಪುರೋಹಿತ ಮತ್ತು ವಿರೂಪಾಕ್ಷ ಹಿರೇಮಠ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *