ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ

Spread the love

ಹುಬ್ಬಳ್ಳಿ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹೇಳಿದ್ದಾರೆ.
ನಗರದ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ನಡೆದ ‘ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮೂರುಸಾವಿರಪ್ಪ ಈಚಗೇರಿ’ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಸೇವೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರಯೋಧರ ಕುರಿತಾದ ಇಂತಹ ಸಾಕ್ಷ್ಯಚಿತ್ರಗಳು ಇನ್ನಷ್ಟು ನಿರ್ಮಾಣಗೊಳ್ಳಬೇಕು. ಇವು ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನವನ್ನು ಬೆಳೆಸಲು ಮಾರ್ಗದರ್ಶಿಯಾಗಲಿ ಎಂದು ಅವರು ಆಶಿಸಿದರು.
ನಂತರ. ಆದರ್ಶ ಕಾಲೇಜಿನ ನಿರ್ದೇಶಕರಾದ ಬಿ.ಸಿ. ಗೌಡರ ಮಾತನಾಡಿ, ಈಚಗೇರಿಯವರ ದೇಶಭಕ್ತಿ ಮತ್ತು ಬಲಿದಾನ ಸ್ಮರಣೀಯವಾದುದು. ಅವರ ಚರಿತ್ರೆಯನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು. ಅಲ್ಲದೆ, ಅವರ ಸ್ಮಾರಕದ ಬಳಿ ಪುತ್ಥಳಿ ನಿರ್ಮಾಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಹೇಳಿದರು. ಈ ಸಮಯದಲ್ಲಿ ಹುಬ್ಬಳ್ಳಿ ಬಣಗಾರ ಸಮಾಜದ ಅಧ್ಯಕ್ಷ ಅನಿಲ ಕವಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ
‘ಮೂರುಸಾವಿರಪ್ಪ ಈಚಗೇರಿ’ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಶ್ರಮಿಸಿದ ನವಋತು ಕ್ರಿಯೇಶನ್ ನಿರ್ದೇಶಕ ನವೀನ್ ಶೆಟ್ಟರ್ ಮತ್ತು ಛಾಯಾಗ್ರಾಹಕ ಶ್ರೀ ವರುಣ್ ಶಿಗ್ಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಜಡೆಯ ಶಂಕರಲಿಂಗ ಟ್ರಸ್ಟ್ ಕಮಿಟಿಯ ಮುಖ್ಯ ಟ್ರಸ್ಟಿಗಳಾದ ಮಲ್ಲೇಶಪ್ಪ ಗರಗ, ಷಣ್ಮುಖಪ್ಪ ಹೂಲಿ, ನವಿಲೆ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿಎ ಸುರೇಶ್ ಚೆನ್ನಿ, ಶಿವಕುಮಾರ್ ಈಚಗೇರಿ, ದಯಾನಂದ ಈಚಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಶೈಲ ಜೋಡಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ವೀರಣ್ಣ ಹೂಲಿ ವಂದಿಸಿದರು.

Leave a Reply

Your email address will not be published. Required fields are marked *