
ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿ ಇದೆ , ಇದರ ತನಿಖೆಯನ್ನು ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಅವರು ಗುರುವಾರದಂದು ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ: ಪ್ರಕರಣದ ಹಿಂದಿದೆ ಕಾಣದ ಕೈಗಳ ಕೈವಾಡ
“ಧರ್ಮಸ್ಥಳ ಪ್ರಕರಣ ಎಡಚರು ಮಾಡಿದ್ದಾರೆ ಮತ್ತು ಅದಕ್ಕೆ ಕಾಂಗ್ರೆಸ್ ಪಕ್ಷ ಇನ್ ಡೈರೆಕ್ಟಾಗಿ ಬೆಂಬಲ ಕೋಟ್ಟಿದೆ. ಇದನ್ನು ನಾವು ಬಯಲಿಗೆ ಎಳೆಯಬೇಕು” ಎಂದು ಪ್ರಲ್ಹಾದ ಜೋಶಿ ಹೇಳಿದರು. ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಬಂಧನದಲ್ಲಿ ಇಟ್ಟುಕೊಳ್ಳದೆ, ಸುಮ್ಮನೆ ಬಿಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಅವನು ಯಾವಾಗ ಬಂದು ತಾನು ಮಾಡಿದ್ದನ್ನು ಹೇಳಿದನೋ, ಆಗಲೇ ಅವನನ್ನು ಬಂಧಿಸಬೇಕಿತ್ತು. ಅವನಿಗೆ ಸೂಕ್ತ ಭದ್ರತೆ ಇಲ್ಲದೆ ಎಲ್ಲೆಲ್ಲೋ ಓಡಾಡುತ್ತಿದ್ದಾನೆ. ಈ ಪ್ರಕರಣದ ಹಿಂದೆ ಹಿಂದೂ ವಿರೋಧಿ ಶಕ್ತಿಗಳು ಮತ್ತು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಪತ್ತೆ ಹಚ್ಚಬೇಕು” ಎಂದು ಅವರು ಒತ್ತಾಯಿಸಿದರು.
ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಬೇಡಿಕೆ
ಪ್ರಕರಣದ ಸೂತ್ರಧಾರರು ಯಾರು ಎಂಬುದನ್ನು ಪತ್ತೆ ಹಚ್ಚಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದರು. ಇದಕ್ಕಾಗಿ ಎನ್ಐಎ ತನಿಖೆಯ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಅವರು ಪುನರುಚ್ಚರಿಸಿದರು. “ಯಾವ ಆಧಾರದ ಮೇಲೆ ಎಸ್ಐಟಿ ರಚನೆ ಮಾಡಿದರು, ಮತ್ತು ಯಾವ ಆಧಾರದ ಮೇಲೆ ಆರೋಪಿಯನ್ನು ಹೊರಗೆ ಬಿಟ್ಟರು? ತಲೆ ಬುರುಡೆ ಎಲ್ಲಿಂದ ಬಂತು, ಅದು ಹೆಣ್ಣಿನದ್ದೋ ಗಂಡಿನದ್ದೋ, ಯಾರು ಕೊಟ್ಟರು ಎಂದು ಕೇಳದೇ ಬಿಟ್ಟಿದ್ದು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತದೆ” ಎಂದು ಅವರು ಟೀಕಿಸಿದರು.
ಸಂಸ್ಕೃತಿ ನಾಶಪಡಿಸುವ ಹುನ್ನಾರ
“ಇದೇ ಘಟನೆ ಬೇರೆ ಯಾವುದೇ ಧರ್ಮದ ಬಗ್ಗೆ ಆಗಿದ್ದರೆ, ಈ ಧೈರ್ಯ ಬರುತ್ತಿತ್ತಾ? ಇದು ನಿಯೋಜಿತವಾಗಿ ನಮ್ಮ ಶ್ರದ್ಧಾ ಕೇಂದ್ರಗಳ ಮೇಲಿನ ಶ್ರದ್ಧೆಯನ್ನು ಕಡಿಮೆ ಮಾಡುವ ಹುನ್ನಾರವಾಗಿದೆ” ಎಂದು ಪ್ರಲ್ಹಾದ
ಜೋಶಿ ಹೇಳಿದರು. ಈ ಪಿತೂರಿ ಕೇವಲ ಆ ಮುಸುಕುಧಾರಿ ವ್ಯಕ್ತಿಯಿಂದ ಮಾತ್ರವಲ್ಲ, ಅದರ ಹಿಂದೆ ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳನ್ನು ನಾಶಪಡಿಸುವ ಉದ್ದೇಶವಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. “ಶನಿ ಶಿಂಗಣಾಪುರ, ಈಶಾ ಫೌಂಡೇಶನ್, ಧರ್ಮಸ್ಥಳ ಮತ್ತು ಶಬರಿಮಲೆ ಘಟನೆಗಳನ್ನು ನೋಡಿದರೆ, ಇವುಗಳ ಹಿಂದೆ ಒಂದು ವ್ಯವಸ್ಥಿತ ಯೋಜನೆ ಇದೆ. ಈ ಯೋಜನೆಯ ಸೂತ್ರಧಾರರನ್ನು ಪತ್ತೆ ಹಚ್ಚಬೇಕು” ಎಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರವು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಲ್ಹಾದ ಜೋಶಿ ಹೇಳಿದರು.

