
ಪೌರಕಾರ್ಮಿಕರ ನಿವೇಶನಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ: ಶಾಸಕ ಅರವಿಂದ ಬೆಲ್ಲದ್ಗೆ ಮನವಿ ಸಲ್ಲಿಕೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಗರದ ನವನಗರದಲ್ಲಿ ಹಂಚಿಕೆ ಮಾಡಲಾಗಿರುವ ಖಾಯಂ ಪೌರಕಾರ್ಮಿಕರ ನಿವೇಶನಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಜೈ ಭೀಮ ಯುವ ಶಕ್ತಿ ಸೇನಾ (ರಿ) ಸಂಘಟನೆಯು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ಗೆ ಮನವಿ ಪತ್ರ ಸಲ್ಲಿಸಿದೆ. ಈ ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಿ, ಪಾಲಿಕೆ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಸಂಘಟನೆ ಆಗ್ರಹಿಸಿದೆ.
ಸಂಘಟನೆಯ ಮನವಿ ಪತ್ರದಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ನಿವೇಶನಗಳಿಗೆ ಸೂಕ್ತ ರಸ್ತೆ ಸಂಪರ್ಕವಿಲ್ಲ, ಕುಡಿಯುವ ನೀರು ಮತ್ತು ವಿದ್ಯುತ್ ಸೌಕರ್ಯ ಒದಗಿಸಿಲ್ಲ ಎಂದು ಸಂಘಟನೆ ದೂರಿದೆ. ಅಲ್ಲದೆ, ನಿವೇಶನಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ, ಮತ್ತು ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಅವೈಜ್ಞಾನಿಕವಾಗಿ ನಿವೇಶನಗಳಲ್ಲೇ ಅಳವಡಿಸಲಾಗಿದೆ ಎಂದು ಆರೋಪಿಸಿದೆ.
ಪಾಲಿಕೆಯಿಂದ ಹಕ್ಕುಪತ್ರಗಳನ್ನು ನೀಡಿದ್ದರೂ, ಅವುಗಳ ನೋಂದಣಿಯನ್ನು ಕೂಡಲೇ ಮಾಡಿಕೊಡಬೇಕು. ಒಟ್ಟು 122 ನಿವೇಶನಗಳ ಪೈಕಿ ಕೇವಲ 14 ನಿವೇಶನಗಳಿಗೆ ಮಾತ್ರ ಮನೆ ನಿರ್ಮಾಣ ಅನುದಾನ ನೀಡಿದ್ದು, ಉಳಿದ 108 ನಿವೇಶನಗಳಿಗೂ ಅನುದಾನ ಮಂಜೂರು ಮಾಡಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹರೀಶ್ ಎಂ. ಗುಂಟ್ರಾಳ, ಉಪಾಧ್ಯಕ್ಷ ಸುನಿಲ್ ಕುರ್ಡೇಕರ್, ಮುಖಂಡ ಪ್ರಕಾಶ್ ಬಳ್ಳಾರಿ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ಬಸವರಾಜ್ ಆದಾಪುರ, ಹಾಗೂ ಇತರ ಸದಸ್ಯರಾದ ರಮೇಶ್ ಹಿರೇಮನಿ, ವಿಜಯ ಮಾದರ್, ಹನುಮಂತ ಯರಗುಂಟಿ, ಬಸವರಾಜ್ ಚಳಗೇರಿ, ಮಂಜುನಾಥ್ ಅಂತರಗಂಗಾ, ಕೇಶವ್ ಶಿಂಗ್ರಿ, ಗಂಗಾಧರ್ ಪಾಣಿಕೊಪ್ಪ, ಗಣೇಶ್ ಸಿ.ಎನ್., ಸಂತೋಷ್ ಲಮಾಣಿ, ಪ್ರಸಾದ್ ಜವಳಗಿ, ಗೋಪಾಲ್ ಗೋವಾ, ಮಲ್ಲೇಶ್ ತಪ್ಪಲದಡ್ಡಿ, ತಿಮ್ಮಪ್ಪ ಗುಂಡಪಲ್ಲಿ, ಹೇಮಂತ ತೇರದಾಳ, ಅನಿಲ್ ಬ್ಯಾಳಿ, ಸುರೇಶ ತೇಗಣ್ಣವರ, ನಿತಿನ್ ಹುಟಗಿ, ಸಂತೋಷ್ ನಿರೂಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

