

ಹುಬ್ಬಳ್ಳಿ: ರಸ್ತೆ ಸುರಕ್ಷತೆಯನ್ನು ಖಚಿತಪಡಿಸುವ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಬುಧವಾರ ಪ್ರಮುಖ ಸಭೆ ನಡೆಯಿತು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.
ಸಚಿವರ ಪ್ರಮುಖ ಸೂಚನೆಗಳು
ಸಭೆಯಲ್ಲಿ, ಪ್ರಮುಖವಾಗಿ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಮತ್ತು ಅವಶ್ಯಕತೆ ಇರುವ ಕಡೆಗಳಲ್ಲಿ ಅಂಡರ್ಪಾಸ್ಗಳನ್ನು ನಿರ್ಮಿಸುವಂತೆ ಸಚಿವರು ಸೂಚಿಸಿದರು. ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ಲಾಕ್ ಸ್ಪಾಟ್ಗಳನ್ನು (ಅಪಾಯಕಾರಿ ಸ್ಥಳಗಳು) ಗುರುತಿಸಿ, ಅವುಗಳನ್ನು ನಿವಾರಿಸಲು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಜೊತೆಗೆ, ಹೆದ್ದಾರಿಗಳಲ್ಲಿ ಅಗತ್ಯವಿರುವ ಕ್ರಾಸ್ಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಕೂಡ ಸೂಚಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ಕಾಮಗಾರಿಗೆ ವೇಗ ನೀಡಲು ನಿರ್ದೇಶನ: ಹುಬ್ಬಳ್ಳಿ-ಧಾರವಾಡ ಬೈಪಾಸ್ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ, ಅಗತ್ಯವಿರುವ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಕುರಿತು ಸಹ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಎನ್.ಎಚ್.ಕೋನರೆಡ್ಡಿ, ಅಬ್ಬಯ್ಯ ಪ್ರಸಾದ್, ಮಹಾಪೌರ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ್ ಚೌಹಾಣ, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

