
ಹುಬ್ಬಳ್ಳಿ: ಬುಡಕಟ್ಟು ಪ್ರದರ್ಶನ ಕಲೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದ್ದು, ಸರ್ಕಾರ ಈ ಕಲೆ ಮತ್ತು ಸಂಪ್ರದಾಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಹೆಚ್ಚು ಒತ್ತು ನೀಡಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ತಾಲೂಕಿನ ನೂಲ್ವಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಹುಬ್ಬಳ್ಳಿ ತಾಲೂಕು ಘಟಕ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ. ಅವರ ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅಲೆಮಾರಿ ಮತ್ತು ಬುಡಕಟ್ಟು ಜನಾಂಗಕ್ಕೆ ಪ್ರೋತ್ಸಾಹ ಮತ್ತು ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಂದಗೋಳ ಘಟಕದ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಬುಡಕಟ್ಟು ಸಮುದಾಯದಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿರುತ್ತದೆ. ಮೊದಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಅದರ ಮೂಲಕ ಸಾಮರಸ್ಯ ಮತ್ತು ಐಕ್ಯತೆಯ ಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಜಿ.ಎಚ್. ಕಟ್ಟಿ ಮಾತನಾಡಿ, ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದರೆ, ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಹಿಂದ್ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ, ಜನಪದ ಕಲಾವಿದ ಪ್ರಶಾಂತ ತಡಸೂರ, ಗ್ರಾಪಂ ಸದಸ್ಯರಾದ ದೇವನಗೌಡ ಧರ್ಮಗೌಡ, ಗಂಗನಗೌಡ ನರಗುಂದ, ಕಾಲೇಜಿನ ಉಪನ್ಯಾಸಕರಾದ ಜಿ.ಬಿ. ತಹಶೀಲ್ದಾರ, ಎಸ್.ಎಸ್. ಹಿರೇಗೌಡು, ಎಂ.ಎಂ. ಹಾದಿಮನಿ, ಸದಾನಂದ, ನಿಂಗಪ್ಪ ದೊಡ್ಡಪೂಜಾರ ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಹೊಳಮ್ಮನವರ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಪ್ರೊ. ಕೆ.ಎಸ್. ಜಲಗಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಿರೂಪಿಸಿದರು. ಕಾರ್ಯದರ್ಶಿ ಸಂತೋಷಕುಮಾರ ಬಡಿಗೇರ ವಂದಿಸಿದರು.

