ದಸರಾ ಒಡೆಯರ್ ಕಪ್‌ನಲ್ಲಿ ಹುಬ್ಬಳ್ಳಿಯ ಕ್ರೀಡಾಪಟುಗಳ ಮಿಂಚು: ಪದಕಗಳ ಬೇಟೆ!

Spread the love

ಮೈಸೂರು: ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್-2025 ಕ್ರೀಡಾಕೂಟದಲ್ಲಿ ಹುಬ್ಬಳ್ಳಿಯ ವಿಶೇಷ ಚೇತನ ಕ್ರೀಡಾಪಟುಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಈ ಕ್ರೀಡಾಪಟುಗಳು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿ ನಾಡಿನ ಗಮನ ಸೆಳೆದಿದ್ದಾರೆ.

ಮೊಹಮ್ಮದ್ ಗೌಸ್ ಅವರಿಂದ ತ್ರಿವಳಿ ಸಾಧನೆ
ಕ್ರೀಡಾಪಟು ಮೊಹಮ್ಮದ್ ಗೌಸ್ ನಸೀಬ್ ಹುಸೇನ್ ಕುಲಬನ್ನಿ ಅವರು ಈ ದಸರಾ ಕ್ರೀಡಾಕೂಟದಲ್ಲಿ ಮೂರು ವಿಭಾಗಗಳಲ್ಲಿ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಗೌಸ್ ಅವರು ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್-2025ರಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ, ರಾಜ್ಯಮಟ್ಟದ ವಿಚಾರ ಕ್ರಿಕೆಟ್ ಪಂದ್ಯಾವಳಿ ದಸರಾ ಕಪ್-2025ರಲ್ಲಿ ಭಾಗವಹಿಸಿದ ಇವರ ತಂಡವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇವುಗಳಲ್ಲದೆ, ಸೆ:27 ರಂದು ನಡೆದ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿಕೊಂಡು ತ್ರಿವಳಿ ಸಾಧನೆ ಮಾಡಿದ್ದಾರೆ.

ಬಿಬಿ ಆಯೇಷಾ ಅವರಿಂದ ಎರಡು ಪದಕಗಳ ಬೇಟೆ
ಮತ್ತೋರ್ವ ವಿಶೇಷ ಚೇತನ ಕ್ರೀಡಾಪಟು ಬಿಬಿ ಆಯೇಷಾ ಶಬ್ಬೀರ್ ಅಹ್ಮದ್ ಪಣಿಬಂದ್ ಅವರು ಎರಡು ಪ್ರಮುಖ ಸ್ಪರ್ಧೆಗಳಲ್ಲಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಇವರು ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್-2025ರಲ್ಲಿ ಕರ್ನಾಟಕ ಪ್ಯಾರಾಥೋಬಾಲ್ ಅಸೋಸಿಯೇಷನ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿರುತ್ತಾರೆ.

ಇದರೊಂದಿಗೆ, 9ನೇ ವಿಶೇಷ ಚೇತನ ಮಹಿಳೆಯರ ಪಂಚ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ಗಳಿಸಿ ಗಮನ ಸೆಳೆದಿದ್ದಾರೆ.

ಮೈಸೂರು ದಸರಾ ಕ್ರೀಡಾಕೂಟದಲ್ಲಿ ಈ ಹುಬ್ಬಳ್ಳಿ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ವಿಜಯದ ಮೂಲಕ ಅವರು ತಮ್ಮ ತವರು ಪ್ರದೇಶದ ಯುವ ಕ್ರೀಡಾಪಟುಗಳಿಗೆ ಮತ್ತು ವಿಶೇಷ ಚೇತನರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

Leave a Reply

Your email address will not be published. Required fields are marked *